ಮಂಗಳೂರು: ಮುಂಜಾನೆ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿ, ವೈದ್ಯಕೀಯ ವಿದ್ಯಾರ್ಥಿನಿಯನ್ನು ಬೆದರಿಸಿ, ಮಾನಭಂಗ ಮಾಡಿ ನಗದು, ಎಟಿಎಂ ಕಾರ್ಡ್ ದರೋಡೆ ಮಾಡಿದ್ದ ಮೈಸೂರು ಮೂಲದ ಯುವಕನಿಗೆ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏಳು ವರ್ಷಗಳ ಕಠಿಣ ಸಜೆ ವಿಧಿಸಿದೆ.
ಕೆ.ಆರ್.ನಗರದ ಅಗ್ರಹಾರ ನಿವಾಸಿ ನಾಗೇಶ್(32) ಅಲಿಯಾಸ್ ನಾಗ ಅಪರಾಧಿ. ದೌರ್ಜನ್ಯಕ್ಕೊಳಗಾದವರು ದೇರಳಕಟ್ಟೆಯಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕೇರಳ ಮೂಲದ 22ರ ಹರೆಯದ ಯುವತಿ.
ವಿವಾಹಿತನಾಗಿರುವ ನಾಗೇಶ ಕಂಕನಾಡಿಯ ರೆಸ್ಟೋರೆಂಟ್‌ನಲ್ಲಿ ಹೆಲ್ಪರ್ ಆಗಿದ್ದ. ಅಲ್ಲಿಂದ ದೇರಳಕಟ್ಟೆಯಲ್ಲಿರುವ ಕಾಲೇಜ್‌ನ ಕ್ಯಾಂಟೀನ್‌ಗೆ ಸೇರಿಕೊಂಡಿದ್ದ. ಅಲ್ಲಿಂದಲೂ ಕೆಲಸ ಬಿಟ್ಟು ಮೈಸೂರಿಗೆ ತೆರಳಿದ್ದ. 2017ರ ಡಿಸೆಂಬರ್‌ನಲ್ಲಿ ಮಂಗಳೂರಿಗೆ ಬಂದು ಕೆಲಸ ಹುಡುಕುತ್ತಿದ್ದ. ಈ ಸಂದರ್ಭ ಕೃತ್ಯ ಎಸಗಿದ್ದಾನೆ.
ದ್ಯಾರ್ಥಿನಿ ನಿಲಯಕ್ಕೆ ರಾತ್ರಿ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 457ರಡಿ ಏಳು ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ದಂಡ ಕಟ್ಟಲು ತಪ್ಪಿದರೆ ಒಂದು ವರ್ಷ ಸಾದಾ ಸಜೆ, ಸೆಕ್ಷನ್ 380ರ ಅಡಿ ಐದು ವರ್ಷ ಸಜೆ, ಐದು ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ವರ್ಷ ಸಾದಾ ಸಜೆ, ಸೆಕ್ಷನ್ 397ರ ಅನ್ವಯ ಏಳು ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ ಒಂದು ವರ್ಷ ಸಾದಾ ಸಜೆ, ಲೈಂಗಿಕ ಕಿರುಕುಳ, ಮಾನಭಂಗಕ್ಕೆ ಸೆಕ್ಷನ್ 354ರಡಿ ಐದು ವರ್ಷ ಕಠಿಣ ಸಜೆ, 5000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ವರ್ಷ ಸಾದಾ ಸಜೆ ವಿಧಿಸಲಾಗಿದೆ.
ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಪ್ರಾಥಮಿಕ ತನಿಖೆ ಹಾಗೂ ಆಗಿನ ಡಿಸಿಪಿ ಉಮಾಪ್ರಶಾಂತ್ ವಿಸ್ತೃತ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಶನಿವಾರ ಆರೋಪ ಸಾಬೀತಾಗಿದ್ದು, ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸೈದುನ್ನೀಸಾ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದಿಸಿದ್ದರು.
ಹೊಂಚು ಹಾಕಿ ಕೃತ್ಯ ಎಸಗಿದ್ದ: ಕೈನೋವಿದ್ದ ಕಾರಣ ದೇರಳಕಟ್ಟೆಯ ಮೆಡಿಕಲ್ ಶಾಪ್‌ನಿಂದ ಡಿ.4ರ ಸಾಯಂಕಾಲ ಪ್ಲಾಸ್ಟರ್ ಖರೀದಿಸಿದ್ದ ನಾಗೇಶ್ ಒಂದು ತುಂಡನ್ನು ಕೈಗೆ ಅಂಟಿಸಿಕೊಂಡಿದ್ದ. ಬಳಿಕ ಊಟ ಮಾಡಿ ವೈದ್ಯಕೀಯ ಕಾಲೇಜಿನ ಬಳಿ ವಿದ್ಯಾರ್ಥಿನಿಯರು ಸಾಗುತ್ತಿರುವುದನ್ನು ಕಂಡು ಹಿಂಬಾಲಿಸಿ ಹಾಸ್ಟೆಲ್ ತಲುಪಿದ್ದ. ಕಳವಿಗೆ ಸಂಚು ರೂಪಿಸಿ ಹಾಸ್ಟೆಲ್ ಹಿಂಭಾಗ ತೆರಳಿ ರಾತ್ರಿ ಗಿಡಗಳ ನಡುವೆ ಅಡಗಿದ್ದು, ಕಾಂಪೌಂಡ್ ಹಾರಿ ಒಳಗೆ ಬಂದು ಪೈಪ್ ಮೂಲಕ ಮೂರನೇ ಮಹಡಿಗೆ ಏರಿ ಒಳಪ್ರವೇಶಿಸಿದ್ದ. ಕೆಲವು ರೂಮ್‌ಗಳಿಗೆ ಒಳಗಿನಿಂದ ಚಿಲಕ ಹಾಕಿತ್ತು. ಆದರೆ ಎರಡನೇ ಮಹಡಿಯ ಕೊಠಡಿಯೊಂದರ ಬಾಗಿಲಿಗೆ ಚಿಲಕ ಹಾಕಿರಲಿಲ್ಲ. ಒಳಗೆ ನುಗ್ಗಿದ ನಾಗೇಶ್, ಮಲಗಿದ್ದ ವಿದ್ಯಾರ್ಥಿನಿಯನ್ನು ಎಬ್ಬಿಸಿ ಕಬ್ಬಿಣದ ರಾಡ್ ತೋರಿಸಿ ಬೆದರಿಕೆ ಹಾಕಿದ್ದ. ತನ್ನಲ್ಲಿದ್ದ ಪ್ಲಾಸ್ಟರ್‌ನ್ನು ಆಕೆಯ ಬಾಯಿಗೆ ಅಂಟಿಸಿ, ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, 5 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದ. ಆಕೆ ತನ್ನ ಪರ್ಸ್ ಹಾಗೂ ಎಟಿಎಂ ಕಾರ್ಡ್ ತೋರಿಸಿದ್ದಲ್ಲದೆ ಸಂಜ್ಞೆಗಳ ಮೂಲಕ ಪಾಸ್‌ವರ್ಡ್ ತಿಳಿಸಿದ್ದಳು. ಬಳಿಕ ಆತ ಮಾನಭಂಗ ಎಸಗಿದ್ದ. ಇನ್ನೊಂದು ರೂಮ್‌ಗೆ ಹೋಗಿ ಮೊಬೈಲ್ ಕಳವು ಮಾಡಿ ಪೈಪ್‌ಗೆ ಬಟ್ಟೆ ಒಣಗಿಸುವ ಹಗ್ಗ ಕಟ್ಟಿ ಕೆಳಕ್ಕಿಳಿದು ಪರಾರಿಯಾಗಿದ್ದ. ಅದೇ ದಿನ ನಗರದ ಎರಡು ಎಟಿಎಂಗಳಲ್ಲಿ ಕಾರ್ಡ್ ಬಳಸಿ 7500 ರೂ. ಪಡೆದಿದ್ದು, ರಾತ್ರಿಯೇ ಮೈಸೂರಿಗೆ ತೆರಳಿ ಮರುದಿನ ಅಲ್ಲೂ ಎಟಿಎಂನಿಂದ ಹಣ ತೆಗೆದಿದ್ದ. ಈ ನಡುವೆ, ವಿದ್ಯಾರ್ಥಿನಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಡಿ.10ರಂದು ಆರೋಪಿಯನ್ನು ಬಂಧಿಸಲಾಗಿತ್ತು.