ಜಿಲ್ಲೆ

ಅತ್ಯಾಚಾರದ ವಿರುದ್ಧ ನಾರಿಯರ ಆಕ್ರೋಶ: ಮೊಳಕಾಲ್ಮೂರಲ್ಲಿ ಪ್ರತಿಭಟನೆ

Chitradurga

ಮೊಳಕಾಲ್ಮೂರು: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಪ್ರೇರಣಾ ಮಹಿಳಾ ಸಂಘಟನೆ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿಮಹಿಳೆಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೆಇಬಿ ವೃತ್ತದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಂಘಟನೆ ಸಂಸ್ಥಾಪಕಿ ಕೆ.ಜೆ.ಜಯಲಕ್ಷ್ಮಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಪರಂಪರೆಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನವಿದೆ. ಆದರೆ, ಮನುಷ್ಯ ಸಂಬಂಧಗಳ ಅರಿವೇ ಇಲ್ಲದ ದುಷ್ಟರು ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಿ ಕ್ರೂರತನ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಅನ್ಯ ದೇಶದಲ್ಲಿ ನಡೆಯುವ ಹೆಣ್ಣಿನ ಮಾನಭಂಗ, ಹಿಂಸೆ, ಕೊಲೆ, ಸುಲಿಗೆ ಸುದ್ದಿ ಕೇಳುತ್ತಿದ್ದೆವು. ಆದರೆ, ನಮ್ಮಲ್ಲಿ ಕಠಿಣ ಕಾನೂನಿನ ನಡುವೆಯೂ ಇಂತಹ ಹೇಯ ಕೃತ್ಯಗಳು ನಡೆಯುತ್ತಿರುವುದು ವಿಷಾದಕರ ಎಂದರು.

ಆಳುವ ಸರ್ಕಾರಗಳು ಕಾನೂನು ಅನುಷ್ಠಾನದಲ್ಲಿ ನಿರ್ಲಕ್ಷೃ ವಹಿಸಿರುವುದೇ ಇಂತಹ ದುಷ್ಕೃತ್ಯ ನಿರಂತರ ನಡೆಯಲು ಕಾರಣ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು. ದುರುಳರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ಮೂಲಕ ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಕಾರ್ಯದರ್ಶಿ ನೇತ್ರಾವತಿ, ಬೋರಮ್ಮ, ಮಹಾದೇವಿ, ಮಹಮದ್ ಜಾಫರ್, ಪರಮೇಶಿ, ಮಂಜುನಾಥ, ಪಾಲಯ್ಯ, ಚಂದ್ರಣ್ಣ, ಅಜ್ಜಣ್ಣ, ರಮೇಶ್ ಇತರರಿದ್ದರು.