ಮಡಿಕೇರಿ: ಅತ್ಯಾಚಾರ ಪ್ರಕರಣದ ಅಪರಾಧಿಗೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಸುಹರ್ ಅಲಿ(೩೧) ಶಿಕ್ಷೆಗೆ ಗುರಿಯಾದ ಅಪರಾಧಿ.
ಅಸ್ಸಾಂ ರಾಜ್ಯದಿಂದ ಕೂಲಿಕೆಲಸದ ನಿಮಿತ್ತ ಜಿಲ್ಲೆಯ ಪೊನ್ನಂಪೇಟೆ ಸಮೀಪ ಹುದಿಕೇರಿ ಹೈಸುಡ್ಲೂರು ಗ್ರಾಮದಲ್ಲಿ ಬೊಜ್ಜಂಗಡ ದೇವಯ್ಯ ಎಂಬವರ ಕಾಫಿ ತೋಟದಲ್ಲಿ ಈತ ಕೂಲಿಕೆಲಸ ಮಾಡಿಕೊಂಡಿದ್ದ. ೨೦೧೬ರಲ್ಲಿ ಹೈಸುಡ್ಲೂರು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಪ್ರಕರಣದ ತನಿಖೆ ಆಗಿನ ವಿರಾಜಪೇಟೆ ಪೊಲೀಸ್ ಉಪಾಧೀಕ್ಷಕ ನಾಗಪ್ಪರವರು ಕೈಗೊಂಡು ಅಪರಾಧಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಾಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವಿರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಅಪರಾಧಿ ಸುಹರ್ ಅಲಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಗೌರವಾನ್ವಿತ ನ್ಯಾಯಾಧೀಶ ಎಸ್.ಆರ್.ದಿಂಡಲ್ ಕೊಪ್ಪರವರು ಅಪರಾಧಿಗೆ ಜೈಲು ಶಿಕ್ಷೆ ವಿಧಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಯಾಸೀನ್ ಅಹಮದ್ ವಾದ ಮಂಡಿಸಿದ್ದರು.