ಜಿಲ್ಲೆ

ಅತ್ಯಾಚಾರ ಆರೋಪಿ ಬಂಧನ

Haveri

ರಾಣೆಬೆನ್ನೂರ: 15 ವರ್ಷದ ಬಾಲಕಿಯೊಬ್ಬಳನ್ನು ಅಪಹರಣ ಮಾಡಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪಿಯೊಬ್ಬನನ್ನು ಇಲ್ಲಿಯ ಶಹರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ಅರ್ಬಾಜ ದಸ್ತಗೀರ (22) ಬಂಧಿತ ಆರೋಪಿ. ಈತ ನಗರದ 15 ವರ್ಷದ ಬಾಲಕಿಯೊಬ್ಬಳನ್ನು ಅ. 4ರಂದು ಅಪಹರಿಸಿಕೊಂಡು ಹೋಗಿದ್ದನು. ಈ ಕುರಿತು ಬಾಲಕಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಬಾಲಕಿ ಹಾಗೂ ಆರೋಪಿಯನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.

ನಂತರ ಬಾಲಕಿಯನ್ನು ವಿಚಾರಿಸಿದಾಗ, ‘ಅ. 4ರಂದು ಅಪಹರಣ ಮಾಡಿಕೊಂಡು ಹೋಗಿ ಅ. 5ರಂದು ನಗರದ ಲಾಡ್ಜ್​ವೊಂದರಲ್ಲಿ ಅತ್ಯಾಚಾರ ಎಸಗಿದ್ದಾನೆ. ಮರುದಿನ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ತನ್ನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ನಿರಂತರವಾಗಿ ಎರಡು ದಿನ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಆರೋಪಿ ವಿರುದ್ಧ ಶಹರ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.