ಉಡುಪಿ: ಕಿವಿ ಕೇಳದ, ಮಾತನಾಡಲು ಬಾರದ 15 ವರ್ಷ ಪ್ರಾಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿ ಹರೀಶ್ (33) ಎಂಬಾತನ ಮೇಲಿನ ಆರೋಪ ಸಾಬೀತಾಗಿದೆ. ಅಪರಾಧಿಗೆ ಫೆ.22ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ನ್ಯಾಯಾಧೀಶೆ ಯಾದವ್ ವನಮಾಲಾ ಆನಂದ ರಾವ್ ಆದೇಶದಲ್ಲಿ ತಿಳಿಸಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರಲ್ಲಿ ಪ್ರಕರಣ ದಾಖಲಾಗಿತ್ತು. 2018ರ ಡಿಸೆಂಬರ್ ತಿಂಗಳಿನಲ್ಲಿ 15 ವರ್ಷದ ತನ್ನ ಮನೆ ಸಮೀಪದ ಬಾಲಕಿಯನ್ನು ನೆರೆಯ ನಿವಾಸಿ ಹರೀಶ್ ಎಂಬಾತ ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಸಂತ್ರಸ್ತ ಬಾಲಕಿಗೆ ಕಿವಿ ಕೇಳದ, ಮಾತನಾಡಲು ಬಾರದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಬಾಲಕಿ ಗರ್ಭೀಣಿಯಾದ ಬಳಿಕ ವಿಷಯ ಬೆಳಕಿಗೆ ಬಂದಿದ್ದು, 2019ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಬಳಿಕ ಸಂತ್ರಸ್ತೆ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿ 7ನೇ ತರಗತಿ ಓದಿದ್ದು ಅಪರಾಧಿಯನ್ನು ಕೈಸನ್ನೆ ಹಾಗೂ ಬರವಣಿಗೆ ಮೂಲಕ ಗುರುತಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದರು.