ಮಂಗಳೂರು: ಭಿನ್ನ ಸಾಮರ್ಥ್ಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಈಗ ಮುಂಬೈಯಲ್ಲಿ ವಾಸವಿರುವ ಅಬ್ದುಲ್ ಹಲೀಂ (37) ಹಾಗೂ ಕುಲಶೇಖರದ ಶಮೀನಾ ಬಾನು (22) ಬಂಧಿತರು.
ಪ್ರಕರಣದ ವಿವರ: ದೂರುದಾರರ ತಮ್ಮ ಮನ್ಸೂರ್ ಅಹ್ಮದ್ ಬಾಬಾ ಶೇಖ್ ಹಾಗೂ ಆತನ ಪರಿಚಯಸ್ಥ ಅಬ್ದುಲ್ ಹಲೀಂ ಕಾಸರಗೋಡಿಗೆ ಹೋಗಿ ಹಿಂತಿರುಗುವಾಗ ಮಂಜೇಶ್ವರ ಬಳಿ ಬೈಕ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಅವರಿಬ್ಬರೂ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆಸ್ಪತ್ರೆಯ ಒಂದೇ ರೂಮ್‌ನಲ್ಲಿ ಮಧ್ಯೆ ಸ್ಕ್ರೀನ್ ಹಾಕಿಸಿ ಚಿಕಿತ್ಸೆ ಪಡೆಯುತ್ತಿದ್ದರು. ದೂರುದಾರರು ಮತ್ತು ಅವರ ದೊಡ್ಡ ಮಗಳು ಅಪಘಾತದ ಬಗ್ಗೆ ವಿಚಾರಿಸಲು ಮಂಜೇಶ್ವರ ಠಾಣೆಗೆ ಹೋಗಿದ್ದು, ಈ ಸಮಯ ಸಣ್ಣ ಮಗಳು ವಿಶೇಷ ಭಿನ್ನ ಸಾಮರ್ಥ್ಯದ ಮಗಳನ್ನು ತಮ್ಮನ ಹೆಂಡತಿ ಶಮೀನಾ ಬಾನು ಜತೆ ಬಿಟ್ಟು ಹೋಗಿದ್ದರು.
ಈ ಸಂದರ್ಭ ಶಮೀರಾ ಬಾನು ಆರೋಪಿ ಅಬ್ದುಲ್ ಹಲೀಂ ಜತೆ ಸೆಕ್ಸ್ ಮಾಡುತ್ತಿರುವುದನ್ನು ಭಿನ್ನ ಸಾಮರ್ಥ್ಯದ ಬಾಲಕಿ ನೋಡಿದ್ದು, ಅದಕ್ಕಾಗಿ ಆಕೆಯನ್ನು ಕರೆದು ಬೆಡ್ ಮೇಲೆ ಕೂರಿಸಿಕೊಂಡು ಅಬ್ದುಲ್ ಹಲೀಂ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ತಾಯಿ ದೂರು ನೀಡಿದ್ದಾರೆ. ಪೊಲೀಸ್ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃತ್ಯಕ್ಕೆ ಪ್ರೇರಣೆ ನೀಡಿದ ಸಂಬಂಧಿಯೇ ಆದ ಆರೋಪಿ ಶಮೀನಾ ಬಾನುವನ್ನು ತಕ್ಷಣ ಬಂಧಿಸಿದ ಪೊಲೀಸರು, ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಅಬ್ದುಲ್ ಹಲೀಂನನ್ನು ಗೋವಾದ ಮಡಗಾಂವ್‌ನಲ್ಲಿ ಅಲ್ಲಿನ ಪೊಲೀಸರ ಸಹಾಯದಿಂದ ಬಂಧಿಸಿ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇತ್ತೀಚೆಗೆ ಅಪ್ರಾಪ್ತರ ಹಾಗೂ ವಿಶೇಷ ಭಿನ್ನ ಸಾಮರ್ಥ್ಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆತ್ತವರು ಸಂಬಂಧಿಕರ ಜತೆ ಕಳುಹಿಸುವಾಗ ಅಥವಾ ನಿಲ್ಲಿಸುವಾಗ ಅತ್ಯಂತ ನಿಗಾ ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.