ಜಿಲ್ಲೆ

ಅಪ್ರಾಪ್ತ ನಾದಿನಿಯ ಮೇಲೆ ಅತ್ಯಾಚಾರ: 25 ವರ್ಷಗಳ ಜೈಲು ಶಿಕ್ಷೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಅಪ್ರಾಪ್ತ ವಯಸ್ಸಿನ ನಾದಿನಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ವ್ಯಕ್ತಿಗೆ ನಗರದ ಪೋಕ್ಸೊ ವಿಶೇಷ ನ್ಯಾಯಾಲಯ 25 ವರ್ಷಗಳ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.


ದುದ್ದಗೆರೆ ಗ್ರಾಮದ ರಾಚಪ್ಪ ಶಿಕ್ಷೆಗೊಳಗಾದವನು. ಈತನಿಗೆ ವಿವಾಹವಾಗಿತ್ತು. ಅಡುಗೆ ಕೆಲಸ ಮಾಡುತ್ತಿದ್ದ ಈತ ಹೆಚ್ಚಾಗಿ ಮಾವನ ಮನೆಯಲ್ಲೇ ಇರುತ್ತಿದ್ದ. ಅಪ್ರಾಪ್ತ ವಯಸ್ಸಿನ ನಾದಿನಿಯ ಜತೆಗೆ ಸಲುಗೆಯಿಂದ ಇದ್ದ. 2022ರ ಮಾರ್ಚ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನಾದಿನಿ ಜತೆಗೆ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಇದಾದ ನಂತರವೂ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಆಕೆ ಗರ್ಭಿಣಿಯಾಗಿದ್ದರಿಂದ ವಿಷಯ ಬಹಿರಂಗವಾಗಿ ಆಕೆಯ ತಾಯಿ ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಸ್ವರ್ಣ ಅವರು ಆರೋಪಿಯ ವಿರುದ್ಧ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮ ಖಮ್ರೋಜ್ ನಡೆಸಿದ ವಿಚಾರಣೆಯಲ್ಲಿ ಆರೋಪಿ ವಿರುದ್ಧ ಆರೋಪಗಳು ಸಾಬೀತಾದವು.

ಈ ಹಿನ್ನೆಲೆಯಲ್ಲಿ ದಂಡದ ಮೊತ್ತದಲ್ಲಿ ಅಪ್ರಾಪ್ತ ನಾದಿನಿಗೆ 75 ಸಾವಿರ ರೂ. ನೀಡಬೇಕು ಎಂದಿರುವ ನ್ಯಾಯಾಧೀಶರು, ಆಕೆ 5 ಲಕ್ಷ ರೂ. ಪರಿಹಾರಕ್ಕೆ ಅರ್ಹಳು ಎಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು.