ಮಂಡ್ಯ: ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೫೧ನೇ ವಾರ್ಷಿಕ ಮಹಾಸಭೆ ಸೆ.೨೨ರಂದು ಬೆಳಿಗ್ಗೆ ೧೧ ಗಂಟೆಗೆ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಯು.ಸಿ. ಶೇಖರ್ ತಿಳಿಸಿದರು.
ಸಂಘದಲ್ಲಿ ಒಟ್ಟು ೫೪೦೦ ಸದಸ್ಯರಿದ್ದು, ಎಲ್ಲ ಸದಸ್ಯರಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗಿದೆ. ನಿತ್ಯ ಸಚಿವ ಕೆ.ವಿ. ಶಂಕರಗೌಡ, ದಿ. ಜಿ.ಎಸ್. ಬೊಮ್ಮೇಗೌಡ ಅವರ ದೂರದೃಷ್ಟಿಯ ಫಲವಾಗಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಆರ್‌ಎಪಿಸಿಎಂಎಸ್ ಸ್ಥಾಪನೆಗೊಂಡು ೭೪ ವಸಂತಗಳನ್ನು ಪೂರೈಸಿದೆ. ಜಿಲ್ಲೆಯ ಎಲ್ಲ ರೈತರ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಕೆಲವು ಸೇವಾ ವಿಭಾಗಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಿಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಘವನ್ನು ಮುನ್ನಡೆಸುವ ಉದ್ದೇಶದಿಂದ ಈಗಿನ ಆಡಳಿತ ಮಂಡಳಿ ಪಣತೊಟ್ಟಿದ್ದು, ಸಂಘವು ಹೆಚ್ಚಿನ ಅಭಿವೃದ್ಧಿಗೆ ಸದಸ್ಯರ ಸಲಹೆ, ಸಹಕಾರ ಅಗತ್ಯ.
ಸಂಘದ ಅಭಿವೃದ್ಧಿಗೆ ಪ್ರಸ್ತುತ ಆಡಳಿತ ಮಂಡಳಿಯ ಯುವಕರು ಉತ್ಸುಕರಾಗಿದ್ದು, ರೈತ ಸಭಾಂಗಣವನ್ನು ಶಾಸಕರ ಅನುದಾನದಲ್ಲಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ನವೀಕರಣ ಮಾಡಲು ಉದ್ದೇಶಿಸಲಾಗಿದೆ. ಕೆಲವು ಗೋಡನ್‌ಗಳು ಶಿಥಿಲಾವಸ್ಥೆ ತಲುಪಿದ್ದು, ಅವುಗಳನ್ನು ನವೀಕರಣ ಮಾಡಲಾಗುವುದು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ರೈತರ ಮಾಲ್ ಯೋಜನೆಯಡಿ ರೈತರಿಗೆ ಯಂತ್ರೋಪಕರಣ ಕೊಡಲು ಉದ್ದೇಶಿಸಲಾಗಿದೆ. ಅಲ್ಲದೆ, ರೈತರು ಬೆಳೆದ ಬೆಳೆಗಳನ್ನು ಖರೀದಿಸಿ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ನಿರ್ದೇಶಕರಾದ ಬೇಲೂರು ಸೋಮಶೇಖರ್, ಕೆ.ಸಿ. ರವೀಂದ್ರ, ಉದಯ್ ಕುಮಾರ್, ಶ್ರೀಧರ್, ಸಿ.ಕೆ. ಪಾಪಯ್ಯ ಹಾಜರಿದ್ದರು.