ಬಾಗೇಪಲ್ಲಿ : ಬಡ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಶೈಕ್ಷಣಿಕ ಸಾಮರ್ಥ್ಯಕ್ಕೆ ಇಂಬು ನೀಡುವ ಮೂಲಕ ಭವಿಷ್ಯ ರೂಪಿಸಲು ನೆರವಾಗುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಬ್ರೂಡ್ರೀಮ್ಸ್ ಪ್ರಾಜೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಟಿಡಿಪಿಐ) ಸಂಸ್ಥೆ ದಕ್ಷಿಣ ಭಾರತದ ನಿರ್ದೇಶಕ ರಂಜಿತ್ ಪ್ರಸಾದ್ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರಿಯಾಂಕನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಬೆಂಗಳೂರು, ಬ್ರೂಡ್ರೀಮ್ಸ್ ಪ್ರಾಜೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಭಾನುವಾರ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ ಹಾಗೂ ಶಿಕ್ಷಕರ ನೇಮಕಾತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರ ಸರ್ಕಾರದ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಟಿಡಿಪಿಐ ಸಂಸ್ಥೆ ಮುಂದಾಗಿದೆ. ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗಿದೆ, ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಈ ಶೈಕ್ಷಣಿಕ ತಾರತಮ್ಯ ಹೋಗಲಾಡಿಸಲು ಶ್ರಮಿಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕಲಿಕೆ ಸಾಮಾಗ್ರಿಗಳನ್ನು ನೀಡುವ ಜತೆಗೆ ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ ಪೂರಕವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ರಂಜಿತ್ ಪ್ರಸಾದ್ ತಿಳಿಸಿದರು.
ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿರುವ ಟಿಡಿಪಿಐ ಸಂಸ್ಥೆಯ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಬಂದಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಳ ಸಾಂಸ್ಕೃತಿಕ ಚಟುವಟಿಗಳು ಗಮನ ಸೆಳೆದವು.
ಟಿಡಿಪಿಐ ಆಂಧ್ರಪ್ರದೇಶದ ಸಂಯೋಜಕ ಮಾಣಿಕ್ಯ ರಾಜ್, ತೆಲಂಗಾಣ ಸಂಯೋಜಕ ವೇದವ್ಯಾಸು, ಜಿಲ್ಲಾ ಸಂಯೋಜಕಿಯರಾದ ಪಿ.ನಾಗವೇಣಿ ನಾರಾಯಣಸ್ವಾಮಿ, ಪುಷ್ಪಾ, ಬಿಆರ್‌ಸಿ ವೆಂಕಟರಾಮ್, ಕ್ಷೇತ್ರ ಸಿಬ್ಬಂದಿ ಆರ್.ಹನುಮಂತರೆಡ್ಡಿ, ಪಿ.ವೆಂಕಟರವಣಪ್ಪ, ಸಿ.ವಿ.ವೆಂಕರಾಯಪ್ಪ, ಬಾಲರಾಜು, ರಂಗಾರೆಡ್ಡಿ, ಮುನಿರಾಜು, ನಾರಾಯಣಸ್ವಾಮಿ ಮುಂಖಂಡ ಸ್ವರ್ಣ ಅಮರನಾಥ್ ಮತ್ತಿತರರು ಇದ್ದರು.