ಜಿಲ್ಲೆ

ಮುಖ್ಯಮಂತ್ರಿಗೆ ರಂಜನ್ ಪತ್ರ

ಮಡಿಕೇರಿ:

ಕೊಡಗಿನ ಸಂಸ್ಕೃತಿ ಉಳಿಸುವ ದೃಷ್ಟಿಯಿಂದ ಪೂರ್ವಜರು ಉಳಿಸಿ ಪೂಜೆಗೆ ಬಳಸುವ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸುವಂತೆ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮನವಿ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಜಿಲ್ಲೆಯ ಜನರು ಪ್ರಮುಖವಾಗಿ ರೈತರು ಮತ್ತು ಬೆಳೆಗಾರರು ಕಾಯಿದೆಯ ಅಸ್ತಿತ್ವಕ್ಕೆ ಮುಂಚೆಯೇ ಕಾಡುಪ್ರಾಣಿಗಳ ವಸ್ತುಗಳನ್ನು ತಮ್ಮಲ್ಲಿ ಸಂರಕ್ಷಿಸಿ ಇಟ್ಟುಕೊಂಡಿದ್ದಾರೆ ಅಲ್ಲದೆ ಇದನ್ನು ಮುಂದಿನ ಪೀಳಿಗೆಗೆ ರವಾನಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಸ್ವಾತಂತ್ರ್ಯ ಪೂರ್ವದಲ್ಲಿ ಸಂಗ್ರಹಿಸಿದವು. ಆಗಿನ ಕಾಲದಲ್ಲಿ ಕಾಡು ಪ್ರಾಣಿಗಳಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲು ಬೇಟೆಯಾಡುವ ಅನಿವಾರ್ಯತೆ ಇತ್ತು. ಅಲ್ಲದೆ ಆಗಿನ ಬ್ರಿಟಿಷ್ ಬೆಳಗಾರರಿಗೆ ಬೇಟೆಯಾಡುವುದು ಒಂದು ಹವ್ಯಾಸವಾಗಿತ್ತು. ಹಾಗಾಗಿ ಈ ವನ್ಯಜೀವಿಗಳ ವಸ್ತುಗಳನ್ನು ಪರಂಪರೆಯ ಗುರುತಾಗಿ ಇರಿಸಲಾಗಿದೆ. ಮತ್ತು ಪಿತ್ರಾರ್ಜಿತವಾಗಿ ಪೀಳಿಗೆಗೆ ರವಾನಿಸಲಾಗಿದೆ. ಪ್ರಸ್ತುತ ಪೀಳಿಗೆಯು ಅದರ ಮೇಲೆ ಭಾವನಾತ್ಮಕ ಬಾಂಧವ್ಯವನ್ನು ಹೊಂದಿದೆ ಮತ್ತು ಇದನ್ನು ಕುಟುಂಬದ ಚರಾಸ್ತಿ ಎಂದು ಪರಿಗಣಿಸಲಾಗಿದೆ.

ಜಿಲ್ಲೆಯಲ್ಲಿ ಜಿಂಕೆ ಕೊಂಬುಗಳನ್ನು ಹಾಗೂ ಕೆಲವು ಕಾಡು ಪ್ರಾಣಿಯ ವಸ್ತುಗಳನ್ನು ದೇವರ ಪೂಜೆಗೆ ಬಳಸಿ, ನಂತರ ಅದನ್ನು ಹೊತ್ತು ಕುಣಿಯುವ ಪದ್ಧತಿ ತಲೆತಲಾಂತರಗಳಿಂದ ನಡೆದು ಬಂದಿದೆ. ಇದು ನಮ್ಮ ಸಂಸ್ಕೃತಿಯ ಸಂಕೇತವಾಗಿದೆ. ಈ ಉದ್ದೇಶದಿಂದ ನಮ್ಮ ಹಿರಿಯರು ಇಂತಹ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದು, ಅದನ್ನು ಮುಂದಿನ ಪೀಳಿಗೆಯವರು ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಅವರ ಆಚಾರ ವಿಚಾರದಂತೆ ದೈವಿಸ್ವರೂಪದಲ್ಲಿ ಈ ವಸ್ತುಗಳನ್ನು ಪೂಜಿಸಿಕೊಂಡು ತಮ್ಮ ಸಂಸ್ಕೃತೀಯ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದಾರೆ.

ಕಾಡು ಪ್ರಾಣಿಗಳ ಹತ್ಯೆ ವಿರುದ್ಧ ಅರಣ್ಯ ಇಲಾಖೆ ವನ್ಯಜೀವಿ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಜನರು ಬಹಳ ಹಿಂದೆಯೇ ಕಾಡುಪ್ರಾಣಿಗಳ ವಸ್ತುಗಳನ್ನು ಸಂಗ್ರಹಿಸುವುದನ್ನು ಸಹ ನಿಲ್ಲಿಸಿದ್ದಾರೆ. ಅವರ ವಶದಲ್ಲಿ ಉಳಿದಿರುವ ವಸ್ತುಗಳು ಪಿತ್ರಾರ್ಜಿತ ಚರಾಸ್ತಿಗಳಾಗಿ, ದೈವಿ ಸ್ವರೂಪವಾಗಿ ಕಾಣುತ್ತಿರುವ ಈ ವಸ್ತುಗಳನ್ನು ನಮಗೆ ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದ, ನಾವು ಪ್ರಕೃತಿಯೇ ದೇವರೆಂದು ಪೂಜಿಸುವ ಕೊಡಗು ಜಿಲ್ಲೆಯ ಸಂಸ್ಕೃತಿ, ಆಚಾರ ವಿಚಾರ ಉಳಿಸುವ ದೃಷ್ಟಿಯಿಂದ ನಮ್ಮ ಹಿರಿಯರು ಉಳಿಸಿಕೊಟ್ಟಿದ್ದ, ಕಾಡುಪ್ರಾಣಿಗಳ ವಸ್ತುಗಳನ್ನು ಹಾಗೆಯೇ ಮುಂದುವರೆಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಮೂಲಕ ಕೊಡಗು ಜಿಲ್ಲೆಯ ಜನರ ಭಾವನೆಗಳಿಗೆ ಯಾವುದೇ ದಕ್ಕೆಯಾಗದಂತೆ, ಇಲ್ಲಿನ ಸಂಸ್ಕೃತಿ ಉಳಿಸಿ ಬೆಳೆಸುವ ದೃಷ್ಟಿಯಿಂದ ಪೂರ್ವಜರು ಸಂಗ್ರಹಿಸಿದ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸುವಂತೆ ಅಪ್ಪಚ್ಚು ರಂಜನ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.