ಶನಿವಾರಸಂತೆ:
ಶಾದಿ ಭಾಗ್ಯ, ಟಿಪ್ಪು ಜಯಂತಿಗಳು ಬೇಕೆಂದು ಯಾರೂ ಕೇಳಿರಲಿಲ್ಲ, ಅವು ಅಂದಿನ ಕಾಂಗ್ರೆಸ್ ಸರ್ಕಾರದ ಒಡೆದಾಳುವ ನೀತಿಯ ತಂತ್ರಗಳಾಗಿದ್ದವು ಎಂದು ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದರು. ಶನಿವಾರಸಂತೆಯಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಶಾದಿ ಭಾಗ್ಯ ಕೆಟ್ಟ ಯೋಜನೆ ಎಂದು ಹೇಳುತ್ತಿಲ್ಲ. ಆದರೆ ಅದರ ಅಗತ್ಯವೇ ಇರಲಿಲ್ಲ. ಯೋಜನೆಗೆ ಭಾರಿ ಪ್ರಚಾರ ಕೊಡಲಾಯಿತೇ ವಿನಃ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆ ಎಂದರು. ಶಾದಿ ಭಾಗ್ಯ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಮಾತ್ರ ಎಂಬುದು ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿತೇ ವಿನಃ, ಅದರಿಂದ ಆದ ಉಪಯೋಗ ಅಷ್ಟರಲ್ಲೇ ಇದೆ ಎಂದು ಹೇಳಿದರು.
ಟಿಪ್ಪು ಜಯಂತಿ ಸೃಷ್ಟಿಸಿದ ಅನಾಹುತ ಎಲ್ಲರಿಗೂ ಗೊತ್ತೇ ಇದೆ, ವಿವರಿಸಿ ಹೇಳುವ ಅಗತ್ಯವಿಲ್ಲ ಎಂದ ಅಪ್ಪಚ್ಚು ರಂಜನ್ ಜನತಂತ್ರದಲ್ಲಿ ಜನರಿಗೆ ಬೇಡದ ವಿಷಯಗಳನ್ನು ಅವರ ಮೇಲೆ ಹೇರಲಾಗುವುದಿಲ್ಲ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಜಿ. ಮೇದಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.