ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಅಂತರ ಕಾಲೇಜ್ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಳಗಾವಿ ಲಿಂಗರಾಜ್ ಕಾಲೇಜ್ ಪುರುಷ ಕ್ರೀಡಾಪಟುಗಳು ಟ್ರೋಫಿಯೊಂದಿಗೆ ಸಂಭ್ರಮಿಸಿದರು. 
ಜಿಲ್ಲೆ

ರಾಣಿ ಚನ್ನಮ್ಮ ವಿವಿ ಕ್ರೀಡಾಕೂಟಕ್ಕೆ ತೆರೆ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಅಂತರ ಕಾಲೇಜ್ ಪುರುಷ ಮತ್ತು ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟ ಸೋಮವಾರ ಸಂಜೆ ವರ್ಣರಂಜಿತವಾಗಿ ತೆರೆ ಕಂಡಿತು. ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ಸ್‌ನಲ್ಲಿ 204 ಅಂಕ ಪಡೆದ ಬೆಳಗಾವಿಯ ಲಿಂಗರಾಜ್ ಕಾಲೇಜ್ ಸಮಗ್ರ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಪುರುಷರ ವಿಭಾಗದಲ್ಲಿ 70 ಅಂಕ ಹಾಗೂ ಮಹಿಳಾ ವಿಭಾಗದಲ್ಲಿ 134 ಅಂಕ ಸೇರಿ 204 ಅಂಕಗಳಿಸಿ ಹೊಸ ಇತಿಹಾಸ ಸೃಷ್ಟಿಸಿತು.

ಪುರುಷರ ಟೀಮ್ ವಿಭಾಗದಲ್ಲಿ ಬೆಳಗಾವಿಯ ಭರತೇಶ ಕಾಮರ್ಸ್ ಕಾಲೇಜ್ ತಂಡ ಚಾಂಪಿಯನ್‌ಶಿಪ್ ಬಾಚಿಕೊಂಡಿತು. ಬೆಳಗಾವಿಯ ಲಿಂಗರಾಜ್ ಕಾಲೇಜ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಹಿಳೆಯರ ಟೀಮ್ ವಿಭಾಗದಲ್ಲಿ ಬೆಳಗಾವಿ ಲಿಂಗರಾಜ್ ಕಾಲೇಜ್ ಮಹಿಳಾ ತಂಡ 134 ಅಂಕ ಗಳಿಸಿ ಚಾಂಪಿಯನ್ ಪಟ್ಟಕ್ಕೆ ಏರಿತು. ಬೆಳಗಾವಿಯ ಗೋವಿಂದರಾಮ್ ಸೆಕ್ಸರಿಯಾ ಕಾಲೇಜ್ 66 ಅಂಕ ಗಳಿಸಿ ಎರಡನೇ ಸ್ಥಾನಗಳಿಸಿತು.

ಹೊಸ ದಾಖಲೆ: ಸೋಮವಾರ ನಡೆದ 400 ಮೀಟರ್ ಮಹಿಳೆಯರ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳಗಾವಿಯ ಗೋಗಟೆ ಕಾಮರ್ಸ್ ಕಾಲೇಜ್ ಕ್ರೀಡಾಪಟು ಶ್ರಾವಣಿ ಭಾಟೆ 1ನಿಮಿಷ 09.90 ಸೆಕೆಂಡ್‌ನಲ್ಲಿ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದರು. ಈ ಹಿಂದೆ ಬೆಳಗಾವಿಯ ಲಿಂಗರಾಜ್ ಕಾಲೇಜ್ ಕ್ರೀಡಾಪಟು ವೀಣಾ ಅಡಗಮನಿ 1ನಿಮಿಷ 15.23 ಸೆಕೆಂಡ್‌ನಲ್ಲಿ ಕ್ರಮಿಸಿದ್ದರು. ಮೂರು ದಿನ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಒಟ್ಟು 13 ಹೊಸ ದಾಖಲೆ ಸೃಷ್ಟಿಯಾದವು.

ಬೆಸ್ಟ್ ಅಥ್ಲೆಟಿಕ್: ಪುರುಷ ವಿಭಾಗದಲ್ಲಿ ಬೆಸ್ಟ್ ಅಥ್ಲೆಟಿಕ್ ಜಾಫರ್‌ಖಾನ್ ಸರವಾರ, ಮಹಿಳಾ ವಿಭಾಗದಲ್ಲಿ ಬೆಸ್ಟ್ ಅಥ್ಲೆಟಿಕ್ ಆಗಿ ಐಶ್ವರ್ಯ ಹಿರೋಜಿ ಹೊರಹೊಮ್ಮಿದರು. ಬೆಳಗಾವಿಯ ಭರತೇಶ ಕಾಲೇಜ್ ಕ್ರೀಡಾಪಟು ಜಾಫರ್‌ಖಾನ್ ಸರವಾರ ಪುರುಷರ ಟ್ರಿಪಲ್ ಜಂಪ್, ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಒಟ್ಟು 1767 ಪಾಯಿಂಟ್‌ದೊಂದಿಗೆ ಕೂಟದ ಬೆಸ್ಟ್ ಅಥ್ಲೆಟಿಕ್ ಪ್ರಶಸ್ತಿ ಬಾಚಿಕೊಂಡರು. ಮಹಿಳಾ ವಿಭಾಗದಲ್ಲಿ ಟ್ರಿಪಲ್ ಹಾಗೂ ಲಾಂಗ್ ಜಂಪ್‌ನಲ್ಲಿ ಒಟ್ಟು 1683 ಅಂಕಗಳಿಸುವ ಮೂಲಕ ಬೆಳಗಾವಿ ಗೋವಿಂದರಾಮ್ ಸೆಕ್ಸರಿಯಾ ಕಾಲೇಜ್ ಕ್ರೀಡಾಪಟು ಐಶ್ವರ್ಯ ಹಿರೋಜಿ ನೇಸರಕರ ಬೆಸ್ಟ್ ಮಹಿಳಾ ಅಥ್ಲೆಟಿಕ್ ಆಗಿ ಹೊರಹೊಮ್ಮಿದರು.