ವಿಜಯಪುರದ ನಗರದ ಸಂಗಮೇಶ್ವರ ಕಾಲನಿಯಲ್ಲಿ ಶುಕ್ರವಾರ ನಡೆದ ರಾಣಿ ಚನ್ನಮ್ಮ ಜಯಂತ್ಯುತ್ಸವ ಹಾಗೂ 197ನೇ ವಿಜಯೋತ್ಸವದಲ್ಲಿ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.ಅಖಿಲಭಾರತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ರವಿ ಕಿತ್ತೂರ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಇತರರಿದ್ದಾರೆ.  
ಜಿಲ್ಲೆ

ವಿದ್ಯಾವಂತರನ್ನು ಮುಖ್ಯವಾಹಿನಿಗೆ ತನ್ನಿ: ಸಂಗಮೇಶ ಬಬಲೇಶ್ವರ

Bellari - Heera Nayak

ವಿಜಯಪುರ: ವಿದ್ಯಾವಂತರನ್ನು ಸಮಾಜದ ಮುಖ್ಯವಾಹಿನಿಗೆ ತಂದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಅಖಿಲ ಭಾರತ ಪಂಚಮಸಾಲಿ
ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದರು. ನಗರದ ಸಂಗಮೇಶ್ವರ ಕಾಲನಿಯಲ್ಲಿ ಶುಕ್ರವಾರ ನಡೆದ ರಾಣಿ ಚನ್ನಮ್ಮ ಜಯಂತ್ಯುತ್ಸವ ಹಾಗೂ 197ನೇ ವಿಜಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಥಾವರಕ್ಕಳಿವುಂಟು ಜಂಗಮಕ್ಕಿಳಿವಿಲ್ಲ’ ಎನ್ನುವಂತೆ, ಮನೆಗೊಬ್ಬಳು ಚನ್ನಮ್ಮ, ಮನೆಗೊಬ್ಬ ರಾಯಣ್ಣನನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತಂದಾಗ ಮಾತ್ರ ಆರಣೆಗಳಿಗೆ ಜೀವ ತುಂಬಿದಂತಾಗುತ್ತದೆ. ಮುಂಬರುವ ಪ್ರತಿ ವರ್ಷ ರಾಣಿ ಚನ್ನಮ್ಮ ಅವರ ಜಯಂತ್ಯುತ್ಸವದಂದು, ನಾಡಿನ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ರಾಣಿ ಚನ್ನಮ್ಮ ಅವರ ಹೆಸರಿನಲ್ಲಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುವ ವಿಶಿಷ್ಟ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾಪೋಷಕ ಮಾದರಿಯಲ್ಲಿ ಹಂತ ಹಂತವಾಗಿ ಈ ಯೋಜನೆ ಯಶಸ್ವಿಗೆ ರಾಜ್ಯಾದ್ಯಂತ ಪ್ರವಾಸಮಾಡಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಲಾಗುವುದು. ಅಂತಹ ಮಕ್ಕಳ ಬಾಳಿಗೆ ಈ ಯೋಜನೆ ಭರವಸೆಯ ಬೆಳಕಾಗಿ ಮೂಡಿಬರಲಿದೆ ಎಂದರು.

ಹುಲಜಂತಿಯ ಪಟ್ಟದ ದೇವರಾದ ಶ್ರೀಮಹಾಳಿಂಗರಾಯ ಮಹಾರಾಜರು ಸಾನ್ನಿಧ್ಯವಹಿಸಿ, ಪ್ರತಿಭಾವಂತ ಮಕ್ಕಳಿಗೆ ಚನ್ನಮ್ಮ ಮತ್ತು ರಾಯಣ್ಣ ಅವರ ಹೆಸರಿನಿಂದ ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಿರುವುದು ಉತ್ತಮ ನಿರ್ಧಾರ. ಚನ್ನಮ್ಮ ಮತ್ತು ರಾಯಣ್ಣರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ರವಿ ಕಿತ್ತೂರ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಹಿರಿಯರಾದ ರಾಮಣ್ಣ ಅಂಕಲಗಿ, ಮೋಹನ ದಳವಾಯಿ, ಸಂತೋಷ ಇಂಡಿ, ಅಮಿತ ಬಿರಾದಾರ, ಪ್ರದೀಪ ಲಿಂಗಹಳ್ಳಿ, ಶಿವು ಕೊಟ್ಯಾಳ, ರಾಜು ರೂಗಿ ಇತರರು ಉಪಸ್ಥಿತರಿದ್ದರು.