ಕೊಪ್ಪಳದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಅಂಗವಾಗಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಎಡಿಸಿ ಸಾವಿತ್ರಿ ಕಡಿ, ಗ್ರೇಡ್-2 ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರು, ಸಮುದಾಯದ ಪ್ರಮುಖರಾದ ಬಸವನಗೌಡ ತೊಂಡಿಹಾಳ, ಸುಮಂಗಲಾ ಹಂಚಿನಾಳ, ಕರಿಯಪ್ಪ ಮೇಟಿ, ಸುಜಾತ ಇದ್ದರು.  
ಜಿಲ್ಲೆ

ಪಂಚಮಸಾಲಿ ಸಮುದಾಯಕ್ಕೆ ಮನ್ನಣೆ ಸಿಗಬೇಕು, ಸಂಸದ ಸಂಗಣ್ಣ ಕರಡಿ ಹೇಳಿಕೆ

ಕೊಪ್ಪಳ: ನಾಡಿಗೆ ಅನ್ನ ನೀಡುವ ಸಮುದಾಯಗಳಲ್ಲಿ ಪಂಚಮಸಾಲಿ ಸಮುದಾಯ ಪ್ರಮುಖ ಪಾತ್ರವಹಿಸಿದೆ. ಸಮುದಾಯಕ್ಕೆ ಸಿಗಬೇಕಾದ ಮನ್ನಣೆ ಇನ್ನೂ ಸಿಕ್ಕಿಲ್ಲ. 2ಎ ಮೀಸಲಾತಿಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮುಂದುವರೆದಿದೆ. ಸರ್ಕಾರ ಶೀಘ್ರ ನೀಡಬೇಕು ಎಂದು ಸಂಸದ ಸಂಗಣ್ಣ ಕರಡಿ ಒತ್ತಾಯಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಸರ್ಕಾರ ಮೀಸಲಾತಿ ನೀಡಲು ತೀರ್ಮಾನ ಕೈಗೊಂಡಿತು. ಆದರೆ, ಸರ್ಕಾರ ಬದಲಾಯಿತು. ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದೆ. ಸಚಿವ ಶಿವಾನಂದ ಪಾಟೀಲ್, ಶಾಸಕರಾದ ವಿನಯ ಕುಲಕರ್ಣಿ,

ವಿಜಯಾನಂದ ಕಾಶಪ್ಪನವರ ನೇತೃತ್ವ ವಹಿಸಿಕೊಳ್ಳಲಿ. ಸಿಎಂ ಭೇಟಿ ಮಾಡಿ ಮೀಸಲಾತಿ ಜಾರಿಗೆ ಯತ್ನಿಸಲಿ. ವಿಪಕ್ಷದಲ್ಲಿನ ಸಮುದಾಯದ ಶಾಸಕರು, ರಾಜಕೀಯ ನಾಯಕರು ಬೆಂಬಲಿಸುತ್ತೇವೆ ಎಂದರು.

ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತ ವೀರ ನಾರಿಯರು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದರು.

ನಾಡಿಗಾಗಿ ಹೋರಾಡಿದರು. ಮಹನೀಯರ ಜೀವನ ನಮಗೆ ಮಾದರಿ ಆಗಬೇಕು. ಸಮಾಜಕ್ಕೆ ನಮ್ಮದೇ ಕೊಡುಗೆ ನೀಡಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.

ಎಡಿಸಿ ಸಾವಿತ್ರಿ ಕಡಿ ಮಾತನಾಡಿ, ರಾಣಿ ಚನ್ನಮ್ಮ ಸ್ವಾತಂತ್ರೃದ ಕಿಚ್ಚು ಹೊತ್ತಿಸಿದ ಧೀರ ಮಹಿಳೆ. ಬ್ರಿಟಿಷರನ್ನು ನಡುಗಿಸಿದವಳು.

ಹೆಣ್ಣು ಉತ್ತಮ ಆಡಳಿತ ನಡೆಸಬಲ್ಲಳು; ಸಮಯ ಬಂದರೆ ಎಂಥವರ ವಿರುದ್ಧ ಹೋರಾಡಬಲ್ಲಳು ಎಂಬುದನ್ನು ತೋರಿಸಿದ ದಿಟ್ಟೆ. ಅವರ ಜೀವನ ನಮಗೆಲ್ಲ ಮಾದರಿ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ, ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ಉಪನ್ಯಾಸಕ ಶರಣಬಸಪ್ಪ ಬಿಳಿಎಲೆ ಚನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಗರದ ರಾಣಿ ಚನ್ನಮ್ಮ ವೃತ್ತದಿಂದ ಸಾಹಿತ್ಯ ಭವನದವರೆಗೆ ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆ ನಡೆಯಿತು. ಗ್ರೇಡ್-2 ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರು, ಸಮುದಾಯದ ಪ್ರಮುಖರಾದ ಬಸವನಗೌಡ ತೊಂಡಿಹಾಳ,

ಸುಮಂಗಲಾ ಹಂಚಿನಾಳ, ಕರಿಯಪ್ಪ ಮೇಟಿ, ಸುಜಾತ, ಕಳಕನಗೌಡ, ದೇವರಾಜ ಹಾಲ ಸಮುದ್ರ, ಗವಿಸಿದ್ದಪ್ಪ ಚಿನ್ನೂರು, ನಿಂಗಮ್ಮ ಸಂಗಣ್ಣ ಕರಡಿ, ಲತಾ ಗವಿಸಿದ್ದಪ್ಪ ಚಿನ್ನೂರು ಇತರರಿದ್ದರು.