ಜಿಲ್ಲೆ

ರಾಣಿ ಅಬ್ಬಕ್ಕ ಸ್ವಾತಂತ್ರೃಕ್ಕಾಗಿ ಹೋರಾಡಿದ ವೀರ ವನಿತೆ

ಬೇಲೂರು: ವೀರ ವನಿತೆ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ದಿನಾಚರಣೆ ಅಂಗವಾಗಿ ಬುಧವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿದ್ದ ಅಬ್ಬಕ್ಕ ರಥಯಾತ್ರೆಯನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಹಾಗೂ ದೇಶಭಕ್ತ ಬಳಗದ ಸದಸ್ಯರು ಸ್ವಾಗತಿಸಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ವೀರ ವನಿತೆ ರಾಣಿ ಅಬ್ಬಕ್ಕ ಪ್ರತಿಮೆ ಇದ್ದ ರಥ ಯಾತ್ರೆ ಸ್ವಾಗತಿಸಿ ಮಾತನಾಡಿದ ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್, ರಾಣಿ ಅಬ್ಬಕ್ಕ ಕೇವಲ ಕರ್ನಾಟಕದ ಹೆಮ್ಮೆ ಮಾತ್ರವಲ್ಲ, ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ. ಪೋರ್ಚುಗೀಸರ ವಿರುದ್ಧ ಧೈರ್ಯವಾಗಿ ಹೋರಾಡಿದ ದೇಶ ಪ್ರೇಮಿ. ಅವರ 500ನೇ ಜನ್ಮ ದಿನಾಚರಣೆ ಅಂಗವಾಗಿ ಬೇಲೂರಿಗೆ ಬಂದ ರಥಯಾತ್ರೆಯನ್ನು ಪಂಜಿನ ಮೆರವಣಿಗೆ ನಡೆಸಿ ಅಬ್ಬಕ್ಕನವರ ಶೌರ್ಯ ಧೈರ್ಯವನ್ನು ಜನತೆಗೆ ನೆನಪಿಸುತ್ತಿದ್ದೇವೆ. ಜತೆಗೆ ಪ್ರತಿಯೊಬ್ಬರೂ ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದರು.

ದೇಶಭಕ್ತ ಬಳಗದ ಮಹೇಶ್, ವೀರಭದ್ರಪ್ಪ, ಆಶಾಕಿರಣ್ ,ಕೇಶವ ಕಿರಣ್, ದೇವರಾಜ್, ಮಂಜುನಾಥ್, ಸುಶ್ಮಿತಾ, ಎಬಿವಿಪಿ ಪ್ರಮುಖರಿದ್ದರು.