ಜಿಲ್ಲೆ

ಶಿವರಾತ್ರಿ ಪ್ರಯುಕ್ತ ಮೈಸೂರಿನಲ್ಲಿ ರಂಗೋಲಿ ಸ್ಪರ್ಧೆ

ಮೈಸೂರು: ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್, ಕೆಎಂಪಿಕೆ ಟ್ರಸ್ಟ್ ಮತ್ತು ಜೆಸಿಐ ಮೈಸೂರು ಕಿಂಗ್ ಲೇಡೀಸ್ ಸಂಸ್ಥೆ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಬುಧವಾರ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ರಂಗೋಲಿಯಲ್ಲಿ ಶಿವನ ಚಿತ್ರ ಬಿಡಿಸಿದರು. ಅತ್ಯುತ್ತಮ 5 ರಂಗೋಲಿ ಸ್ಪರ್ಧಿಗಳಾದ ರಾಮಾನುಜಾ ರಸ್ತೆಯ ನಿವಾಸಿ ಸುಶೀಲಾ, ಕಲ್ಯಾಣಗಿರಿಯ ಕೋಮಲಾ, ವಿದ್ಯಾರಣ್ಯಪುರಂನ ವನಿತಾ ಸುಭಾಷ್, ಎಂ.ಎಚ್. ಜನಿಷಾ, ಶ್ರೀರಾಂಪುರಂ ನಿವಾಸಿ ಮಂಗಳಾ ಅವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ.ಕೆ. ರಘುರಾಮ್ ವಾಜಪೇಯಿ ಮಾತನಾಡಿ, ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ ಉಳಿಸಿ ಬೆಳೆಸುವಲ್ಲಿ ಹಬ್ಬಗಳ ಪಾತ್ರ ಮಹತ್ವವಾಗಿದೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ, ಮನುಷ್ಯರ ನಡುವೆ ಬಾಂಧವ್ಯ ಬೆಳೆಸಲು ಹಬ್ಬಗಳು ಸಹಕಾರಿಯಾಗಿದೆ. ಸದೃಢ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇಂತಹ ಹಬ್ಬಗಳು ಹಾಗೂ ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದ್ಯಸ ಮಾ.ವಿ.ರಾಮಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ಪಬ್ಲಿಕ್‌ ಶಾಲೆಯ ಸಿಇಒ ತೇಜಸ್ ಶಂಕರ್, ಸಮೃದ್ಧಿ ಟ್ರಸ್ಟ್ ಅಧ್ಯಕ್ಷ ಸಹನಗೌಡ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸಾಯಿರಾಂ ಫೌಂಡೇಷನ್ ಅಧ್ಯಕ್ಷ ಖುಷಿ, ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ, ವಕೀಲರಾದ ಜಯಶ್ರೀ, ಶಿವರಾಮ್, ಸಂಧ್ಯಾ, ಸುಶೀಲ, ಮಹಾನ್ ಶ್ರೇಯಸ್, ಜೆಸಿಐ ಸದಸ್ಯರಾದ ಮೋಹನ್ ರಾಚಯ್ಯ, ಗೌತಮ್ ಹಾಗೂ ಇತರರು ಇದ್ದರು.