ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಡಿಬೈಲು ಬೆಟ್ಟದಲ್ಲಿರುವ ಶ್ರೀ ರಂಗನಾಥ ಸ್ವಾಮಿಯನ್ನು ಅಡ್ಡೆಯಲ್ಲಿ ಆಂಜನೇಯ ಸ್ವಾಮಿ ಹಾಗೂ ಸುಬ್ರಮಣ್ಯ ಸ್ವಾಮಿ ವಾಹನ ನವಿಲು ವಿಗ್ರಹ ಮೂರ್ತಿಗಳನ್ನು ಕೂರಿಸಿ ಉತ್ಸವ ನಡೆಸಲಾಯಿತು. 
ಜಿಲ್ಲೆ

ವೈಭವದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ

ಲೋಕೇಶ್ ಮನು. ಡಿ

ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಡಿಬೈಲು ಬೆಟ್ಟದಲ್ಲಿ ಭಾನುವಾರ ರಂಗನಾಥಸ್ವಾಮಿ ಹಗಲು ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.


ಅಡಿಬೈಲು ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ಬೆಳಗ್ಗಿನಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಾಲಯದ ಅರ್ಚಕರು ರಂಗನಾಥಸ್ವಾಮಿ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದರು. ನಂತರ ವಿವಿಧ ಹೂಗಳಿಂದ ಅಲಂಕರಿಸಿ, ನೈವೇದ್ಯ ಅರ್ಪಿಸಿದರು. ಕೆಂಚಮ್ಮನ ಹೊಸಕೋಟೆ ಮತ್ತು ಕುಂದೂರು ಹೋಬಳಿಯ 48 ಹಳ್ಳಿಗಳ ಜನರು ಸೇರುವ ಜಾತ್ರೆಯಲ್ಲಿ ಕುಂದೂರು ಹೋಬಳಿಯ ಹೊಳಗರಹಳ್ಳಿಯ ಬಿಂದಿಗಮ್ಮ ಹಾಗೂ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಡಿಬೈಲು(ಭರತ್ತೂರು) ರಂಗನಾಥಸ್ವಾಮಿಗೆ ಕಲ್ಯಾಣ ಮಹೋತ್ಸವ ಜರುಗಿತು.


ಜಾತ್ರೆಯ ಸಂಭ್ರಮ ಸಂಕ್ರಾಂತಿ ಹಬ್ಬದಂದು ಆರಂಭವಾಯಿತು. ಕುಂದೂರು ಹೋಬಳಿ ವ್ಯಾಪ್ತಿಗೊಳಪಡುವ 20 ಗ್ರಾಮಗಳಿಗೆ ಅಡ್ಡೆ ಮೇಲೆ ಶ್ರೀ ರಂಗನಾಥಸ್ವಾಮಿ ಉತ್ಸವಮೂರ್ತಿ ಮೆರವಣಿಗೆ ಸಾಗಿತು. ಉತ್ಸವ ಮುಗಿದ ನಂತರ ಜಾತ್ರೆ ನಡೆಯುವ ಏಳು ದಿನಗಳ ಮೊದಲು ದೇವರ ಉತ್ಸವ ಮೂರ್ತಿಗಳನ್ನು ಬೆಟ್ಟದಲ್ಲಿರುವ ದೇವಾಲಯಕ್ಕೆ ತರಲಾಯಿತು.


ಭಾನುವಾರ ಅಡಿಬೈಲು ಬೆಟ್ಟದ ಮೇಲಿರುವ ಶ್ರೀ ರಂಗನಾಥಸ್ವಾಮಿ ದೇವರ ಮೂರ್ತಿಯನ್ನು ಅಡ್ಡೆಯಲ್ಲಿ ಕೂರಿಸಿ ಸಂಭ್ರಮದಿಂದ ಹಗಲು ಜಾತ್ರೆಯನ್ನು ನಡೆಸಲಾಯಿತು. ನಂತರ ಆಂಜನೇಯ ಮೂರ್ತಿ, ಸುಬ್ರಹ್ಮಣ್ಯ ಸ್ವಾಮಿ ವಾಹನ ನವಿಲು ವಿಗ್ರಹ ಮೂರ್ತಿಯನ್ನು ಇರಿಸಿ ವೇದ ಘೋಷಗಳೊಂದಿಗೆ ದೇವಾಲಯದ ಸುತ್ತ ಮೆರವಣಿಗೆ ಮೂಲಕ ಉತ್ಸವ ನಡೆಸಲಾಯಿತು.


ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಸಮಿತಿ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ಇರುವುದರಿಂದ ಅರಣ್ಯ ಮತ್ತು ಪೊಲೀಸ್ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.