ಹಿರೀಸಾವೆ ಹೋಬಳಿ ಬೂಕನಬೆಟ್ಟ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಬಿ.ಎಂ.ಗೋವಿಂದರಾಜ್, ಎಚ್.ಜಿ.ರಾಮಕೃಷ್ಣ, ಹರೀಶ್, ಬೋರಣ್ಣ ಇತರರು ಇದ್ದರು. 
ಜಿಲ್ಲೆ

ಜ.10 ರಿಂದ ರಂಗನಾಥಸ್ವಾಮಿ ಜಾತ್ರೆ

ನಾಗೇಶ ಎಸ್

ಹಿರೀಸಾವೆ: ಬೂಕನ ಬೆಟ್ಟದಲ್ಲಿ ಜ.10ರಿಂದ 21ರವರೆಗೆ ಶ್ರೀ ರಂಗನಾಥಸ್ವಾಮಿಯ 93ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ಬೂಕನಬೆಟ್ಟ ಗ್ರಾಮದಲ್ಲಿ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರೆಗೆ ಸಕಲ ಸೌಕರ್ಯಗಳನ್ನು ಒದಗಿಸಲಾಗುವುದು. ಕಳೆದ ವರ್ಷ ರಾಜ್ಯವ್ಯಾಪ್ತಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದರಿಂದ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಭಕ್ತರ ಬೆೇಡಿಕೆಯಂತೆ ವೈಭವದಿಂದ ಆಚರಿಸಲಾಗುವುದು ಎಂದರು.

ದೇಗುಲದ ಅಭಿವೃದ್ಧಿಗಾಗಿ 14 ಜನರನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಲು ನಿರ್ಣಹಿಸಲಾಗಿದೆ. ಜ.8 ರಿಂದಲೇ ಪಶು ವೈದ್ಯರು ಜಾತ್ರಾ ಆವರಣದಲ್ಲಿ ಬೀಡುಬಿಟ್ಟು ಕರ್ತವ್ಯ ನಿರ್ವಹಿಸಲಿದ್ದಾರೆ. ಚನ್ನರಾಯಪಟ್ಟಣ ಡೇರಿಯಿಂದ 15 ಸಾವಿರ ಹಾಗೂ 23 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಟ್ಯಾಂಕರ್‌ಗಳ ಮೂಲಕ ಪ್ರತಿದಿನ ನೀರು ಸರಬರಾಜು ಮಾಡಲಾಗುವುದು. ಜಾತ್ರೆಗೆ ಬರುವ ಜಾನುವಾರಗಳ ಪೈಕಿ ಆಯ್ದ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು. ಜಾತ್ರಾ ಆವರಣದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲಾಗುವುದು. ಕುಡಿಯುವ ನೀರಿನ ತೊಂಬೆಗಳ ನಲ್ಲಿ ಹಾಗೂ ಪೈಪ್ ಸರಿಪಡಿಸಲು ಹಾಗೂ ವಿದ್ಯುತ್ ವ್ಯವಸ್ಥೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್ ಮಾತನಾಡಿ, ಜಾತ್ರೆ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮಕ್ಕೆ ದೇಗುಲಕ್ಕೆ 1.50 ಲಕ್ಷ ರೂ. ನೀಡಲಾಗುವುದು. ಜ.14 ರಂದು ಗ್ರಾಮೀಣ ಕ್ರೀಡಾಕೂಟ ಹಾಗೂ 19ರಂದು ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ. ಜಾತ್ರೆಗೆ ಮುನ್ನೆಚ್ಚರಿಕೆ ಕ್ರಮ, ಬಿಗಿಭದ್ರತೆ ಹಾಗೂ ಸಕಲ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಹರೀಶ್, ಹಿರೀಸಾವೆ ಗ್ರಾಪಂ ಅಧ್ಯಕ್ಷ ಬೋರಣ್ಣ, ಬೆಳಗೀಹಳ್ಳಿ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರಿ, ಪಿಡಿಒ ಸತೀಶ್, ದೇಗುಲದ ಪಾರುಪತ್ತೇದಾರ್ ರಂಗನಾಥ್, ಹಿರೀಸಾವೆ ಠಾಣೆಯ ಎಎಸ್‌ಐ ಲೋಕೇಶ್, ಪ್ರಮುಖರಾದ ತೋಟಿ ಜಯರಾಂ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.