ಜಿಲ್ಲೆ

ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಹಿರಿಯೂರು: ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ರಂಗನಾಥಪುರ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ, ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಗ್ರಾಮಸ್ಥರ ಜತೆ ಚರ್ಚಿಸಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದ ಜತೆಗೆ ಗ್ರಾಮೀಣ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ ಎಂದರು.

ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಆಸ್ಪತ್ರೆ, ಶಿಕ್ಷಣ, ಸುಸಜ್ಜಿತ ರಸ್ತೆ, ಚರಂಡಿ, ಬೀದಿ ದೀಪ, ಸಿಸಿ ರಸ್ತೆ, ಅಂತರ್ಜಲ ಸಂರಕ್ಷಣೆ, ನೀರಾವರಿ ಸೌಲಭ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮದ ಪಶು ಆಸ್ಪತ್ರೆಗೆ ಭೇಟಿ ನೀಡಿ, ಮೂಲ ಸೌಕರ್ಯ ಪರಿಶೀಲಿಸಿದರು. ಸಮಸ್ಯೆ ಆಲಿಸಿದ ಸಚಿವರು, ಹಂತ-ಹಂತವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ.ರಮೇಶ್, ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರ ನಾಯ್ಕ,

ಪಶು ವೈದ್ಯ ಅರುಣ್, ಮಂಜುನಾಥ ಗೌಡ, ದಿನೇಶ್, ಮಂಜೇಶ್, ಜ್ಞಾನೇಶ್, ಮಹೇಶ್, ದಿವಾಕರ್, ಶಿವಕುಮಾರ್, ಲೋಕೇಶ್, ತಿಮ್ಮಣ್ಣ, ಸಂಜೀವಪ್ಪ, ಸಿದ್ದೇಶ್, ಕರಿಯಣ್ಣ, ಚಂದ್ರಶೇಖರ್ ಇತರರಿದ್ದರು.