ಬಳ್ಳಾರಿ: ಭಾರತದ ಗ್ರಂಥಾಲಯ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಕೊಡುಗೆ ಅಪಾರ ಎಂದು ವೀರಶೈವ ಕಾಲೇಜಿನ ನಿವೃತ್ತ ಗ್ರಂಥಪಾಲಕ ಡಾ.ಬಸವರಾಜ ಗದುಗಿನ ತಿಳಿಸಿದರು.
ಇಲ್ಲಿನ ಸರಳಾದೇವಿ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್.ಆರ್.ರಂಗನಾಥನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಗ್ರಂಥಾಲಯಗಳು ಜ್ಞಾನ ಪ್ರಜ್ವಲಿಸುವ ಕೇಂದ್ರಗಳು
ಗ್ರಂಥಾಲಯವನ್ನು ದೇಶದಲ್ಲಿ ಅಭಿವೃದ್ಧಿ ಪಡಿಸುವಲ್ಲಿ ರಂಗನಾಥನ್ ಅವರ ಕೊಡುಗೆ ಅಪಾರವಾಗಿದೆ. ಅವರು ಗ್ರಂಥಾಲಯವನ್ನು ದೇಶದಲ್ಲಿ ತೆರೆಯುವಂತೆ ಶಿಫಾರಸು ಮಾಡಿದರು. ಅವರ ಕೊಡುಗೆಯನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.
ವಿಎಸ್‌ಕೆ ವಿ.ವಿಯ ಪ್ರಸಾರಾಂಗ ನಿರ್ದೇಶಕ ಡಾ.ಬಿ.ಜಿ.ಕನಕೇಶಮೂರ್ತಿ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಉದಾಹರಿಸಿ ಹಲವು ನಿದರ್ಶನಗಳನ್ನು ನೀಡಿದರಲ್ಲದೆ, ಗ್ರಂಥಗಳನ್ನು ಓದುವುದರಿಂದ ಅನೇಕ ರೀತಿಯ ಜ್ಞಾನ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಗ್ರಂಥಗಳ ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಬೆಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜು ಪ್ರಾಚಾರ್ಯ ಡಾ.ಮಂಜುನಾಥರೆಡ್ಡಿ ಎಚ್.ಕೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ.ಬಸಪ್ಪ , ಡಾ.ಕುಂಚಂನರಸಿಂಹಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣೇಶ ಪ್ರಾರ್ಥಿಸಿದರು. ಗ್ರಂಥಪಾಲಕ ಪ್ರಶಾಂತ್.ಕೆ ಸ್ವಾಗತಿಸಿದರು. ಗಿರಿರಾಜ ಕಾರ್ಯಕ್ರಮ ನಿರೂಪಿಸಿದರು.