ಜಿಲ್ಲೆ

ರಂಗನಾಥ ಸ್ವಾಮಿ ಕಾರ್ತಿಕ ದೀಪೋತ್ಸವ

ಬೀರೂರು: ಪಟ್ಟಣದ ಕರಗಲ್ ಬೀದಿಯ ಶ್ರೀ ಬೇಟೆ ರಂಗನಾಥಸ್ವಾಮಿ ಕಾರ್ತಿಕ ದೀಪೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಗಿನಿಂದಲೇ ದೇವಾಲಯಕ್ಕೆ ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ವಿಶೇಷ ಹೂವಿನ ಅಲಂಕಾರ ನೆರವೇರಿಸಿ ಮಹಾಮಂಗಳಾರತಿ ನೆರವೇರಿತು.

ಸಂಜೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷ ಅಲಂಕಾರ ಹಾಗೂ ವಾದ್ಯಗಳೊಂದಿಗೆ ಉತ್ಸವ ಕೊಂಡೊಯ್ದು ಗಂಗಾ ಪೂಜೆಯ ಮೂಲಕ ಮೂಲಸ್ಥಾನಕ್ಕೆ ಆಗಮಿಸಿತು. ಆ ವೇಳೆಗೆ ಮಹಿಳೆಯರು ದೇವಾಲಯದಲ್ಲಿ ನೂರಾರು ದೀಪಗಳನ್ನು ಬೆಳಗಿಸಿದ್ದರು. ಬಳಿಕ ದಾಸಪ್ಪನವರ ಶಂಕು, ಜಾಗಟೆ ನಾದದೊಂದಿಗೆ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಆಗಮಿಸಿದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಬೇಟೆ ರಂಗನಾಥಸ್ವಾಮಿ ಸಮಿತಿ ಅಧ್ಯಕ್ಷರು, ಗೌಡರು, ಕುಲಭಾಂದವರು ಹಾಗೂ ನೂರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.