ಜಿಲ್ಲೆ

ಆದಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ ನಾಳೆ

ಎ. ಆರ್. ರಘುರಾಮ

 ಶ್ರೀರಂಗಪಟ್ಟಣ : ಐತಿಹಾಸಿಕ ಶ್ರೀರಂಗಪಟ್ಟಣದ ಕ್ಷೇತ್ರಪಾಲಕ ಶ್ರೀ ಆದಿರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ (ದೊಡ್ಡಜಾತ್ರೆ) ಫೆ.5ರಂದು ನೆರವೇರಲಿದೆ. ಇದಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಭರದ ಸಿದ್ಧತೆ ಕೈಗೊಂಡಿದೆ.ಮಂಗಳವಾರ ಗಜೇಂದ್ರ ಮೋಕ್ಷ ಆಚರಣೆ ನಡೆಯಲಿದೆ. ಅಂದು ಸಂಜೆ 7 ರಿಂದ ರಾತ್ರಿ 9ರವರೆಗೆ ಕಲ್ಯಾಣಿಯಲ್ಲಿ ಶ್ರೀದೇವಿ, ಭೂದೇವಿ, ರಂಗನಾಯಕಿ ಸಮೇತ ಶ್ರೀ ರಂಗನಾಥಸ್ವಾಮಿ ಪಂಚಲೋಹದ ಉತ್ಸವ ಮೂರ್ತಿಗೆ ವೈದಿಕರು ಪುರಾಣ ಪಠಣೆ ನಡೆಸಿ ವಿಶೇಷ ಪೂಜೆ ಸಮರ್ಪಣೆಯೊಂದಿಗೆ ಗಜೇಂದ್ರ ಮೋಕ್ಷ ನಡೆಸಲಿದ್ದಾರೆ. ನಂತರ ಸಿಡಿಮದ್ದು ಪ್ರದರ್ಶನದೊಂದಿಗೆ ರಥಾರೋಹಣ ಪೂಜೆ ನಡೆಯಲಿದೆ.

ಬ್ರಹ್ಮರಥೋತ್ಸವ ದಿನವಾದ ಬುಧವಾರ ನಸುಕಿನಲ್ಲೇ ದೇವರಿಗೆ ವಿಶೇಷ ಅಭಿಷೇಕ, ವಿಷ್ಣು ಸಹಸ್ರನಾಮ, ಶಾತ್ತುಮೊರೈ ಪಠಣ, ಪೂಜೆಗಳೊಂದಿಗೆ ಮಹಾಮಂಗಳಾರತಿ ನೆರವೇರಲಿದೆ. ಬಳಿಕ ಪಟ್ಟಣದ ಚತುರ್ಥ ರಾಜ ಬೀದಿಗಳಲ್ಲಿ ಸೂರ್ಯಮಂಡಲ ಮತ್ತು ಶೇಷಗಜ ಲಕ್ಷ್ಮೀ ತಿರುನಾಳ್ ರಥೋತ್ಸವ ಸಂಚಾರವಾಗಲಿದೆ. ಸಹಸ್ರಾರು ಪುರ ಜನರಿಂದ ಓಂ ಪ್ರಥಮ ಪೂಜೆ ನೆರವೇರಲಿದೆ.