ಜಿಲ್ಲೆ

ರಂಗಗೀತೆಯಲ್ಲಿ ಕುಳ್ಳೇಗೌಡ ಚಾಂಪಿಯನ್: ಮಹದೇವಮ್ಮ ರನ್ನರ್‌ಅಪ್, ಮಧುಗೆ ತೃತೀಯ ಬಹುಮಾನ

reportermys

ಮಂಡ್ಯ: ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ರಂಗಗೀತೆ ಸ್ಪರ್ಧೆಯಲ್ಲಿ ಪಾಂಡವಪುರದ ಕುಳ್ಳೇಗೌಡ ಪ್ರಥಮ ಬಹುಮಾನ ಪಡೆದುಕೊಂಡರು. ಅಂತೆಯೇ ಮಹದೇವಮ್ಮ ದ್ವಿತೀಯ ಹಾಗೂ ಮಧು ತೃತೀಯ ಬಹುಮಾನಕ್ಕೆ ಪಾತ್ರರಾದರು. ವಿಜೇತರಿಗೆ ಕ್ರಮವಾಗಿ ಐದು ಸಾವಿರ ರೂ, ಮೂರು ಸಾವಿರ ರೂ ಮತ್ತು ಎರಡು ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ನೀಡಲಾಯಿತು.

ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಕೃಷಿಕ ಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ಆಯೋಜಿಸಿದ್ದ ಸ್ಪರ್ಧೆಗೆ 43 ಜನರು ಭಾಗವಹಿಸಿದ್ದರು. ನಾಲ್ಕನೇ ಬಹುಮಾನ ರಕ್ಷಾ, ಐದನೇ ಸ್ಥಾನ ಚೀಣ್ಯ ಮಂಜುನಾಥ್, ಆರನೇ ಬಹುಮಾನವನ್ನು ಅರುಣ್‌ಕುಮಾರ್ ಪಡೆದುಕೊಂಡರು. ಶಶಿಧರ್, ಅಭಿಗೌಡ ಮತ್ತು ಸಿಂಧುಶ್ರೀಗೆ ವಿಶೇಷ ಬಹುಮಾನ ನೀಡಲಾಯಿತು. ತೀರ್ಪುಗಾರರಾಗಿ ಕಲಾಶ್ರೀ ವಿದ್ಯಾಶಂಕರ್ ಕರ್ತವ್ಯ ನಿರ್ವಹಿಸಿದರು.

ಬಹುಮಾನ ವಿತರಿಸಿ ಮಾತನಾಡಿದ ಹರಿಕಥೆ ವಿದ್ವಾನ್ ಶಿವಾರ ಉಮೇಶ್, ರಂಗಭೂಮಿ ಕಲೆಗಳ ಉಳಿವಿಗೆ ಯುವಸಮುದಾಯ ಸಂಕಲ್ಪ ಮಾಡಬೇಕಿದೆ. ಪ್ರಸ್ತುತ ದಿನಗಳಲ್ಲಿ ರಂಗಭೂಮಿ ಕಲೆ ಮರೆಯಾಗುತ್ತಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ. ಒಂದು ವೇಳೆ ಸರ್ಕಾರ ಉದಾಸೀನ ಮಾಡಿದರೆ ಮುಂದಿನ ಪೀಳಿಗೆಗೆ ರಂಗಭೂಮಿ ಇಲ್ಲವಾಗುತ್ತದೆ ಎಂದು ಎಚ್ಚರಿಸಿದರು.

ಹಳ್ಳಿಗಾಡಿನಲ್ಲಿ ರಂಗಕುಣಿತ, ರಂಗಮಂಟಪಗಳು ಇದ್ದವು. ಅಲ್ಲಿ ಎಲ್ಲರೂ ಭಾವೈಕ್ಯತೆಯಿಂದ ರಂಗಕಲೆಗಳನ್ನು ಕಲಿತು ಪ್ರದರ್ಶನ ನೀಡಿ ಮನರಂಜನೆ ಸಮರ್ಪಿಸುತ್ತಿದ್ದರು. ಎಲ್ಲರೂ ಒಗ್ಗೂಡಿಸುವಿಕೆಯನ್ನು ರಂಗಮಂಟಪಗಳು ಕಟ್ಟಿಕೊಡುತ್ತಿದ್ದವು. ಬಡವ, ಶ್ರೀಮಂತರೆನ್ನದೇ ವರ್ಗ ತಾರತಮ್ಯವಿಲ್ಲದೆ ಎಲ್ಲರೂ ಬೆರೆಯುತ್ತಿದ್ದರು ಎಂದು ಸ್ಮರಿಸಿದರು.

ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಅಕಾಡೆಮಿ ಅಧ್ಯಕ್ಷ ಡೇವಿಡ್, ಜನಪರ ಲಯನ್ಸ್ ಸಂಸ್ಥೆ ಅಧ್ಯಕ್ಷೆ ರತ್ನಮ್ಮ, ಕೃಷಿಕ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಹೊನ್ನೇಗೌಡ, ರಮೇಶ್, ಕುಮಾರ್, ವೀರಪ್ಪ, ರಂಗಭೂಮಿ ನಿರ್ದೇಶಕ ಸುರೇಶ್ ಕಾರಸವಾಡಿ, ಕಲಾವಿದ ಕೆಂಚೇಗೌಡ ಇತರರಿದ್ದರು.