ಜಿಲ್ಲೆ

ನ.16ರಿಂದ ರಂಗಭಾಷೆ ಕಾರ್ಯಾಗಾರ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಂಗಭೂಮಿ ಆಶ್ರಯದಲ್ಲಿ ಯಕ್ಷ ರಂಗಾಯಣ ಕಾರ್ಕಳ ಹಾಗೂ ಮಿಲಾಗ್ರಿಸ್​ ಕಾಲೇಜು ಕಲ್ಯಾಣಪುರ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ "ರಂಗಭಾಷೆೆ" ನಾಟಕವೆಂದರೆ ಏನು, ಯಾಕೆ ಮತ್ತು ಹೇಗೆ? ಎಂಬ ರಂಗ ಕಾರ್ಯಾಗಾರ ಮತ್ತು ಕಿರು ನಾಟಕಗಳ ಉತ್ಸವ ನ.16 ರಿಂದ 18 ರವರೆಗೆ ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್​ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನ.16 ರಂದು ಬೆಳಿಗ್ಗೆ 11ಗಂಟೆಗೆ ರಂಗನಿರ್ದೇಶಕ ಪ್ರಸನ್ನ ಶಿಬಿರವನ್ನು ಉದ್ಘಾಟಿಸಿ, ಆಶಯ ಭಾಷಣ ಮಾಡಲಿದ್ದಾರೆ. ರಂಗಭೂಮಿ ಉಡುಪಿ ಗೌರವಾಧ್ಯಕ್ಷ, ಮಾಹೆಯ ಸಹಕುಲಾಧಿಪತಿ ಡಾ. ಎಚ್​. ಎಸ್​. ಬಲ್ಲಾಳ್​ ಅಧ್ಯಕ್ಷತೆ ವಹಿಸಲಿದ್ದಾರೆ. ನಟ ಹಾಗೂ ನಿರ್ದೇಶಕ ಮಂಡ್ಯ ರಮೇಶ್​, ಕಲ್ಯಾಣಪುರ ಮಿಲಾಗ್ರಿಸ್​ ಸಂಸ್ಥೆಗಳ ಸಂಚಾಲಕ ಫರ್ಡಿನಾಡ್​ ಗೋನ್ಸಾಲ್ವಿಸ್​, ರಂಗ ಸಮಾಜದ ಸದಸ್ಯ ಶಶಿಧರ ಭಾರಿಘಾಟ್​, ರಂಗನಿರ್ದೇಶಕಿ ಶ್ವೇತಾರಾಣಿ ಎಚ್​. ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದಿಪ್​ ಚಂದ್ರ ಕುತ್ಪಾಡಿ ಮಾತನಾಡಿ, ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ವೆಂಕಟರಮಣ ಐತಾಳ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ನಾಗಾಭರಣ, ಮಂಡ್ಯ ರಮೇಶ್​, ಸಿಹಿ ಕಹಿ ಚಂದ್ರು, ಕೆ. ಜಿ. ಕೃಷ್ಣಮೂರ್ತಿ, ಶ್ರೀಪಾದ ಭಟ್​, ಮಂಜು ಕೊಡಗು, ವಿನೀತ್​ ಕುಮಾರ್​, ಶ್ವೇತಾ ಎಚ್​. ಕೆ. ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಮೂರು ದಿನಗಳ ವಸತಿಸಹಿತ ಶಿಬಿರದಲ್ಲಿ 90ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ನ. 18ರಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಭಾಸ್ಕರ್​ ರಾವ್​ ಕಿದಿಯೂರು, ರವೀಂದ್ರ ನಾಯಕ್​, ರೇವತಿ ನಾಡಿಗೇರ್​ ಉಪಸ್ಥಿತರಿದ್ದರು.