ಜಿಲ್ಲೆ

ಯುವ ಸಮುದಾಯ ನಾಟಕ ಕಲೆಯಿಂದ ವಿಮುಖ ಖೇದಕರ

ಗೋಪಾಲಕೃಷ್ಣ ಪಾದೂರ್

ಉಡುಪಿ: ಯುವ ಸಮುದಾಯ ನಾಟಕ ಕಲೆಯಿಂದ ವಿಮುಖರಾಗುತ್ತಿದ್ದಾರೆ. ಜಗತ್ತಿನಲ್ಲಿ ನಮ್ಮ ದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಯುವಸಮುದಾಯವಿದೆ ಎಂಬ ಸಂತಸ ಇದ್ದರೂ, ದೇಶದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಯುವಸಮುದಾಯವೇ ಹೆಚ್ಚಿರುವುದು ಕಳವಳಕಾರಿ ಸಂಗತಿ. ಹೀಗಾಗಿ ನಾಟಕರಂಗದತ್ತ ಯುವಸಮುದಾಯವನ್ನು ಸೆಳೆಯಲು ರಂಗಭೂಮಿ ಉಡುಪಿ ಮುಂದಾಗಬೇಕು ಎಂದು ಮಾಹೆಯ ಪ್ರೊ. ವೈಸ್​ ಛಾನ್ಸಲರ್​ ಡಾ. ಎಚ್.ಎಸ್. ಬಲ್ಲಾಳ್​ ಸಲಹೆ ನೀಡಿದರು.

ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ 44ನೇ ಕನ್ನಡ ನಾಟಕ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷಿನಾರಾಯಣ ಕಾರಂತ, ನಾಟಕ ಅತ್ಯಂತ ವಿಶಿಷ್ಟವಾದ ಕಲೆಯಾಗಿದ್ದು, ಪಾಶ್ಚಾತ್ಯ ಸಂಸತಿಯ ನಡುವೆಯೂ ರಂಗಕಲೆ ಜೀವಂತಿಕೆ ಉಳಿಸಿಕೊಂಡಿದೆ. ಇಂದಿನ ಮೊಬೈಲ್​ ಯುಗದಲ್ಲೂ ನಾಟಕ ಕಲೆಯನ್ನು ಬೆಳೆಸಿ, ಪ್ರೋತ್ಸಾಹಿಸುತ್ತಿರುವ ರಂಗಭೂಮಿ ಉಡುಪಿಯ ಕಾರ್ಯ ಅನನ್ಯ ಎಂದು ಶ್ಲಾಘಿಸಿದರು.

ರಂಗಭೂಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು 59ನೇ ವರ್ಷದಲ್ಲಿ ಮುಂದುವರಿಯುತ್ತಿದೆ. ಪ್ರಸ್ತುತ 44ನೇ ವರ್ಷದ ನಾಟಕ ಸ್ಪರ್ಧೆ ಇದಾಗಿದ್ದು, ರಾಜ್ಯದಲ್ಲಿ ಯಾರೂ ಸಹ ಇಷ್ಟು ವರ್ಷಗಳಿಂದ ನಿರಂತರವಾಗಿ ಕನ್ನಡ ನಾಟಕ ಸ್ಪರ್ಧೆ ಆಯೋಜಿಸಿಲ್ಲ. ಎಲ್ಲರ ಸಹಕಾರದೊಂದಿಗೆ ಉಡುಪಿಯ ರಂಗಭೂಮಿ ಆ ಕಾರ್ಯ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ ಎಂದರು.

ಉದ್ಯಮಿ ಸತ್ಯಾನಂದ ನಾಯಕ್​, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸುಪ್ರಸಾದ ಶೆಟ್ಟಿ ಮಾತನಾಡಿದರು. ಉದ್ಯಮಿ ಗೋಪಾಲ ಸಿ. ಬಂಗೇರ ಉಪಸ್ಥಿತರಿದ್ದರು. 12 ದಿನಗಳ ಕಾಲ ನಡೆಯಲಿರುವ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿರುವ ಶ್ರೀಪಾದ ಟಿ. ಭಾಗ್ವತ್​, ವಿನಾಯಕ್​ ಭಟ್​ ಹಾಸಣಗಿ, ಸತೀಶ್​ ತಿಪಟೂರು, ಎಂ.ಎಸ್​. ಭಟ್​, ಲಕ್ಷಿನಾರಾಯಣ ಭಟ್​ ಕೆ. ಅವರಿಗೆ ಸ್ಪರ್ಧೆಯ ಜವಾಬ್ದಾರಿ ಹಸ್ತಾಂತರಿಸಲಾಯಿತು.
ಶಶಿಪ್ರಭಾ ಕಾರಂತ ಪ್ರಾರ್ಥಿಸಿದರು. ಸಂದ ಜತೆ ಕಾರ್ಯದರ್ಶಿ ವಿವೇಕಾನಂದ ಎನ್​. ಪರಿಚಯಿಸಿದರು. ಪ್ರ.ಕಾರ್ಯದರ್ಶಿ ಪ್ರದಿಪಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಸಿರಿಗೆರೆಯ ಧಾತ್ರಿ ರಂಗಸಂಸ್ಥೆಯ ಕಲಾವಿದರು ಮಹಾಂತೇಶ ರಾಮದುರ್ಗ ನಿರ್ದೇಶನದಲ್ಲಿ "ಸೋರುತಿಹುದು ಸಂಬಂಧ' ಎಂಬ ಸಾಮಾಜಿಕ ನಾಟಕ ಪ್ರದರ್ಶಿಸಿದರು.