ಜಿಲ್ಲೆ

ಆ.21ರಿಂದ 25ರವರೆಗೆ ಮಳವಳ್ಳಿಯಲ್ಲಿ ರಂಗೋತ್ಸವ: ರಂಗಬಂಡಿ ಟ್ರಸ್ಟ್ ಅಧ್ಯಕ್ಷ ಮಧು ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ರಂಗಭೂಮಿ ಕಲಾವಿದೆ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ಆ.21ರಿಂದ 25ರವರೆಗೆ ಮಳವಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಂಗೋತ್ಸವ ಆಯೋಜಿಸಲಾಗಿದೆ ಎಂದು ರಂಗಬಂಡಿ ಮಳವಳ್ಳಿ ಟ್ರಸ್ಟ್ ಅಧ್ಯಕ್ಷ ಮಧು ತಿಳಿಸಿದರು.

ಯುವ ಜನರಲ್ಲಿ ರಂಗಾಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ರಂಗೋತ್ಸವ ಆಯೋಜಿಸಲಾಗಿದೆ. ಅದರಂತೆ ಕನ್ನಡ ವೃತ್ತಿ ರಂಗಭೂಮಿಯ ಐತಿಹಾಸಿಕ ರೂಪಕವಾಗಿದ್ದ ಸುಂದರಮ್ಮ ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

21ರಂದು ಸಂಜೆ 6ಗಂಟೆಗೆ ಸಮಾರಂಭವನ್ನು ಲೋಹಿಯ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಉದ್ಘಾಟಿಸಲಿದ್ದಾರೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ರಂಗಭೂಮಿ ನಟಿ ಉಮಾಶ್ರೀ ಅವರಿಗೆ ಮಳವಳ್ಳಿ ಸುಂದರಮ್ಮ ರಂಗ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರದಾನ ಮಾಡಲಿದ್ದಾರೆ. ಅಂತೆಯೇ ಮೈಸೂರಿನ ರಂಗ ನಿರ್ದೇಶಕ ವೈ.ಎಂ.ಪುಟ್ಟಣ್ಣಯ್ಯ ತಂಡದಿಂದ ವಿಶೇಷ ರಂಗಸಂಗೀತ ಕಾರ್ಯಕ್ರಮವಿರಲಿದೆ. 22ರಂದು ಸಂಜೆ 6ಗಂಟೆಗೆ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಡಾ.ಬಿ.ವಿ.ರಾಜರಾಂ ಉದ್ಘಾಟಿಸಲಿದ್ದಾರೆ. 6.45ಕ್ಕೆ ಮಂಟೇಸ್ವಾಮಿ ಕಥಾ ಪ್ರಸಂಗ ಪ್ರದರ್ಶನವಿರಲಿದೆ ಎಂದರು.

23ರಂದು ಸಂಜೆ 6ಗಂಟೆಗೆ ಸಮಾರಂಭವನ್ನು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಉದ್ಘಾಟಿಸಲಿದ್ದಾರೆ. 6.45ಕ್ಕೆ ನ್ಯಾಯ ಕೇಳಿದ ನಿಂಗವ್ವ ನಾಟಕ ಪ್ರದರ್ಶನ, 24ರಂದು ಸಂಜೆ 6ಗಂಟೆಗೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಸಮಾರಂಭ ಉದ್ಘಾಟಿಸಲಿದ್ದು, 6.45ಕ್ಕೆ ಸಂಕ್ರಾಂತಿ ನಾಟಕ ಪ್ರದರ್ಶನ ಮತ್ತು 25ರಂದು ಸಂಜೆ 6ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಪ್ರಧಾನ ಭಾಷಣ ಮಾಡಲಿದ್ದಾರೆ. ರಂಗ ನಿರ್ದೇಶಕ ಬಿ.ಸುರೇಶ ಅಧ್ಯಕ್ಷತೆ ವಹಿಸಲಿದ್ದಾರೆ. 6.45ಕ್ಕೆ ದ್ರೋಪತಿ ಹೇಳ್ತವ್ಳೆ ನಾಟಕ ಪ್ರದರ್ಶನವಿರಲಿದೆ ಎಂದು ವಿವರಿಸಿದರು.

ರಂಗೋತ್ಸವದ ಸಂಚಾಲಕ ಎನ್.ಎಲ್.ಭರತ್‌ರಾಜ್, ಸಾಹಿತಿಗಳಾದ ಮ.ಸಿ.ನಾರಾಯಣ, ಶಿವಣ್ಣ, ವಿನಯ್ ಇದ್ದರು.