ಜಿಲ್ಲೆ

ರಂಗಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ವೇದಿಕೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಂಗ ಶಿಕ್ಷಣದಿಂದ ವ್ಯಕ್ತಿತ್ವ ನಿಮಾರ್ಣ ಸಾಧ್ಯ. ವ್ಯಕ್ತಿಯೊಳಗೆ ಅಡಿಗಿರುವ ಪ್ರತಿಭೆ ರಂಗ ಶಿಕ್ಷಣದ ಮೂಲಕ ಹೊರ ಬರಲು ಸಾಧ್ಯವಿದೆ. ನಾಟಕ ಕೇವಲ ಮನೋರಜನೆ ಮಾತ್ರವಲ್ಲ. ಅದು ವ್ಯಕ್ತಿತ್ವವನ್ನು ರೂಪಿಸುವ ವೇದಿಕೆಯಾಗಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಶುಕ್ರವಾರ ಕಲ್ಯಾಣಪುರ ಮಿಲಾಗ್ರಿಸ್​ ಹೈಸ್ಕೂಲಿನಲ್ಲಿ ರಂಗಭೂಮಿ ಉಡುಪಿ ವತಿಯಿಂದ ಮಕ್ಕಳಿಗೆ ರಂಗ ಶಿಕ್ಷಣ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಜಿಲ್ಲೆಯ 90ಕ್ಕೂ ಅಧಿಕ ಶಾಲೆಗಳಲ್ಲಿ ಯಕ್ಷಶಿಕ್ಷಣದಲ್ಲಿ 3,000ಕ್ಕೂ ಅಧಿಕ ಮಕ್ಕಳು ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ಯಕ್ಷಗಾನ ಕಲಿಕೆಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗಿರುವುದನ್ನು ಮನಗಂಡಿದ್ದೇವೆ. ಇದೇ ರೀತಿ ಈ ಬಾರಿ ಸುಮಾರು 3,000 ಮಕ್ಕಳಿಗೆ ರಂಗ ಶಿಕ್ಷಣ ಕೊಡುವ ಉದ್ದೇಶವಿದೆ. ಆರಂಭದಲ್ಲಿ 12 ಶಿಕ್ಷಣ ಸಂಸ್ಥೆಗಳನ್ನು ಆರಿಸಿಕೊಂಡಿದ್ದು, ಈ ವರ್ಷ 25 ಶಿಕ್ಷಣ ಸಂಸ್ಥೆಗಳಲ್ಲಿ ರಂಗಶಿಕ್ಷಣವನ್ನು ನೀಡಲಾಗುತ್ತಿದೆ. ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಸಭಾ ಕಂಪನ, ಮಾತುಗಾರಿಕೆ, ಅಭಿನಯ, ವಾಕ್ಚಾತುರ್ಯ ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲಾ ಶಿಕ್ಷಣವೂ ದೊರೆಯುತ್ತದೆ ಎಂದರು.

ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದಿಪ್​ಚಂದ್ರ ಕುತ್ಪಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ಡಿಸೋಜಾ, ಹಿರಿಯ ರಂಗಕರ್ಮಿ ಹಾಗೂ ನಾಟಕ ನಿರ್ದೇಶಕ ಬಾಸುಮ ಕೊಡಗು, ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್​, ರಂಗಶಿಕ್ಷಣ ಸಹಸಂಚಾಲಕರಾದ ರವಿರಾಜ್​ ನಾಯಕ್​ ಮತ್ತು ಅಮಿತಾಂಜಲಿ ಕಿರಣ್​, ಸಂಯೋಜಕ ಸೂರ್ಯಪ್ರಕಾಶ್​, ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಶೇರಿಗಾರ್​, ಸದಸ್ಯರಾದ ಮಲ್ಲಿಕಾ ಭಟ್​, ಪಲ್ಲವಿ ಕೊಡಗು, ಯೋಗೀಶ್​, ಅಭಿಷೆೇಕ್​, ವೀಣಾ ಮೊದಲಾದವರು ಉಪಸ್ಥಿತರಿದ್ದರು. ರಂಗಶಿಕ್ಷಣದ ಸಹ ಸಂಚಾಲಕ ರವಿರಾಜ್​ ನಾಯಕ್​ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.