ಹುಬ್ಬಳ್ಳಿ : ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಇಲ್ಲಿನ ಸುನಿಧಿ ಕಲಾ ಸೌರಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಗೋವಿಂದ ಮಣ್ಣೂರ ನಾಟಕೋತ್ಸವ ಹಾಗೂ ರಂಗ ಸಾಧಕರಿಗೆ ರಂಗಸೌರಭ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ. 28ರಂದು ಸಂಜೆ 5.30ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ, ಹಿರಿಯ ಕಲಾವಿದ ಡಾ. ಗೋವಿಂದ ಮಣ್ಣೂರ, ಸುಪ್ರೀಂ ಕೋರ್ಟ್ ನ್ಯಾಯವಾದಿ ಉದಯ ದೇಸಾಯಿ ಹಾಗೂ ಇತರರು ಅತಿಥಿಗಳಾಗಿದ್ದು, ಡಾ. ಎಂ.ಜಿ. ಹಿರೇಮಠ ಉದ್ಘಾಟಿಸುವರು ಎಂದು ತಿಳಿಸಿದರು.
ಡಾ. ಗೋವಿಂದ ಮಣ್ಣೂರ ಅವರು ರಚಿಸಿರುವ ಪಾರ್ವತಿಬಾಯಿ ಪಂಚಸೂತ್ರಗಳು ಹಾಗೂ ಮಾವ ಎಂಬ ಎರಡು ನಾಟಕಗಳ ಪ್ರದರ್ಶನ ನಡೆಯಲಿದೆ. 20ಕ್ಕೂ ಹೆಚ್ಚು ಕಲಾವಿದರು ಈ ನಾಟಕಗಳಲ್ಲಿ ಅಭಿನಯಿಸಲಿದ್ದಾರೆ ಎಂದರು.
ರಂಗಭೂಮಿಗೆ ನೀಡಿದ ಅನುಪಮ ಸೇವೆ ಪರಿಗಣಿಸಿ ರಂಗ ಸೌರಭ-2025 ಪ್ರಶಸ್ತಿಯನ್ನು ಸಂತೋಷ ಮಹಾಲೆ ಹಾಗೂ ಬಸವರಾಜ ಚಕ್ರಸಾಲಿ ಅವರಿಗೆ ಪ್ರದಾನ ಮಾಡಲಾಗುವುದು. ಪ್ರವೇಶ ಉಚಿತವಾಗಿದ್ದು, ರಂಗಾಸಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸುನಿಧಿ ಕಲಾ ಸೌರಭದ ಕಾರ್ಯದರ್ಶಿ ವೀಣಾ ಅಠವಾಲೆ, ಮೈಲಾರಲಿಂಗ ಕಬ್ಬೂರ, ಬಸವರಾಜ ನರಸಾಪೂರ, ದೇವರಾಜ ಲಾಳಿ, ಶ್ರೀನಿವಾಸ ಎ. ಸುದ್ದಿಗೋಷ್ಠಿಯಲ್ಲಿ ಇದ್ದರು.