ಬೆಂಗಳೂರು: ಅಕಾಡೆಮಿ ಆಫ್ ಮ್ಯೂಜಿಕ್ ನಗರದ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಭಾನುವಾರವರೆಗೆ (ಜೂ. 7- 9) ‘ರಂಗ ರಂಗೋಲಿ’ ಕನ್ನಡ ನಾಟಕೋತ್ಸವ ಆಯೋಜಿಸಿದೆ.
8ರಂದು ಸಂಜೆ 6.30ಕ್ಕೆ ಡ್ರಾಮಾಟ್ರಿಕ್ಸ್ ತಂಡದವರು ಎನ್.ಸಿ. ಮಹೇಶ್ ನಿರ್ದೇಶನದ ‘ಮಾಯಾಬಜಾರ್’ ಆಕರ ಗುರುರಾಜುಲು ನಾಯ್ಡು ಅವರ ಹರಿಕಥೆ ಆಧಾರಿತ ನಾಟಕದ ಪ್ರದರ್ಶಿಸಲಿದ್ದಾರೆ.
9ರಂದು ಹುಲುಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ ‘ಕಾಲ ಚಕ್ರ’ ಎಂಬ ನಾಟಕ ಮೂಡಿಬರಲಿದೆ. ಜಯವಂತ ದಳ್ವಿ ಅವರು ಮರಾಠಿಯಲ್ಲಿ ರಚಿಸಿರುವ ಮೂಲ ನಾಟಕವನ್ನು ಎಚ್.ಕೆ. ಕರ್ಕೇರಾ ಕನ್ನಡಕ್ಕೆ ಅನುವಾದಿಸಿದ್ದು, ಸಾಲಿಯಾನ ಉಮೇಶ್ ನಾರಾಯಣ ಸಹ ನಿರ್ದೇಶನ ಹಾಗೂ ರಾಮಕೃಷ್ಣ ಭಟ್ಟರ ಸಂಚಾಲಕತ್ವದಲ್ಲಿ ರಂಗ ಸಮೂಹ ತಂಡದ ಕಲಾವಿದರು ನಾಟಕ ಪ್ರದರ್ಶನ ನೀಡಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಸಾಹಿತಿ ಜಯಂತ ಕಾಯ್ಕಿಣಿ, ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ ಭಾಗವಹಿಸಲಿದ್ದಾರೆ. ಕಲಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.