ಜಿಲ್ಲೆ

ಪ್ರೀತಿಸಿ ಮದುವೆಯಾದವನಿಂದಲೇ ವರದಕ್ಷಿಣೆ ಕಿರುಕುಳ, ಯುವತಿ ಖಾತೆಯಿಂದ 60 ಸಾವಿರ ರೂ. ಡ್ರಾ

Haveri - Kariyappa Aralikatti

ರಾಣೆಬೆನ್ನೂರ: ಪ್ರೀತಿಸಿ ಮದುವೆಯಾದ ಯುವಕ ಇದೀಗ ಆಕೆಗೆ ವರದಕ್ಷಿಣೆ ಕಿರುಕುಳ ನೀಡುತ್ತ ನಾನು ಬೇರೆ ಮದುವೆ ಆಗುತ್ತೇನೆಂದು ಹೇಳಿ ಆಕೆಯ ಖಾತೆಯಿಂದ 60 ಸಾವಿರ ರೂ. ಹಣ ಕೂಡ ದೋಚಿದ ಘಟನೆ ಕುರಿತು ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಹಲಗೇರಿ ಗ್ರಾಮದ ಯುವತಿಯ ಪತಿ ದೇವರಾಜ ಮಹದೇವಪ್ಪ ಪೂಜಾರ ಹಾಗೂ ಮಾವ ಮಹದೇವಪ್ಪ ದೇವರಾಜ ಪೂಜಾರ ವಿರುದ್ಧ ಪ್ರಕರಣ ದಾಖಲಾಗಿದೆ. ದಾವಣಗೆರೆ ಎಸ್‌ಓಜಿ ಕಾಲನಿ ನಿವಾಸಿ ಪ್ರೀತಿ ದೇವರಾಜ ಪೂಜಾರ (21) ದೂರು ದಾಖಲಿಸಿದವರು.
ಘಟನೆ ಹಿನ್ನೆಲೆ…
ದೇವರಾಜ ಹಾಗೂ ನಾನು ಒಬ್ಬರನೊಬ್ಬರು ಪ್ರೀತಿಸಿ ಕಳೆದ ಮಾರ್ಚ್ ತಿಂಗಳಲ್ಲಿ ಮದುವೆ ಕೂಡ ಮಾಡಿಕೊಂಡಿದ್ದೇವೆ. ನಂತರ ಆತನ ಮನೆಗೆ ಬಂದು ಉಳಿದುಕೊಂಡಿದ್ದೇನೆ. 15 ದಿನಗಳ ಕಾಲ ನನ್ನನ್ನು ಸರಿಯಾಗಿ ನೋಡಿಕೊಂಡಿದ್ದ ದೇವರಾಜ ಇದೀಗ ನೀನು ವರದಕ್ಷಿಣೆ ಕೊಡದೆ ಮದುವೆ ಮಾಡಿಕೊಂಡಿದ್ದು ಈಗಲಾದರೂ ವರದಕ್ಷಿಣೆ ಹಣ ತೆಗೆದುಕೊಂಡು ಬಾ. ನೀನು ಕೀಳು ಜಾತಿಯವಳು. ನಿನ್ನಿಂದ ನನಗೆ ಯಾವುದೇ ಉಪಯೋಗವಿಲ್ಲ. ನಿನ್ನ ಪುಕ್ಸಟ್ಟೆ ಮದುವೆ ಮಾಡಿಕೊಂಡು ಬಂದಿದ್ದೇನೆ. ನೀನು ತವರು ಮನೆಗೆ ಹೋಗು. ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಯುತ್ತಿದ್ದಾನೆ.
ಅಲ್ಲದೆ ನನ್ನ ಮೊಬೈಲ್‌ನಿಂದ ನನಗೆ ಗೊತ್ತಿಲ್ಲದೆ 50 ಸಾವಿರ ರೂ. ಹಣವನ್ನು ಆತನ ಸ್ನೇಹಿತ ಮಹ್ಮದರಫೀಕ್‌ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಜತೆಗೆ ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗಿ 10 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾನೆ. ಇದೇ ವಿಚಾರಕ್ಕೆ ದೇವರಾಜ ಹಾಗೂ ಮಾವ ಸೇರಿ ನಿತ್ಯ ಕಿರುಕುಳ ನೀಡುತ್ತ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.