ಜಿಲ್ಲೆ

ವಿಜಯವಾಣಿ ವರದಿ ಪರಿಣಾಮ; ಒಂದೇ ದಿನ 5ಲಕ್ಷ ರೂ. ಮೌಲ್ಯದ 2.700 ಕ್ವಿಂಟಾಲ್ ನಕಲಿ ಬೀಜ ವಶ

Haveri - Kariyappa Aralikatti

ರಾಣೆಬೆನ್ನೂರ: ತಾಲೂಕಿನಲ್ಲಿ ಖುಲ್ಲಾ ಹಾಗೂ ನಕಲಿ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು ಒಂದೇ ದಿನ ಬರೋಬ್ಬರಿ 5 ಲಕ್ಷ ರೂ. ಮೌಲ್ಯದ 2.700 ಕ್ವಿಂಟಾಲ್ ಖುಲ್ಲಾ ಬೀಜ ವಶಪಡಿಸಿಕೊಂಡ ಘಟನೆ ತಾಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಕೃಷ್ಣಪ್ಪ ರಾಯಪ್ಪ ವಡೇರಹಳ್ಳಿ ಎಂಬುವನು ತಮ್ಮ ಮನೆಯಲ್ಲಿಯೆ ಖುಲ್ಲಾ ಹಾಗೂ ಕಳಪೆ ಮೆಕ್ಕೆಜೋಳ ಬೀಜ ಇಟ್ಟುಕೊಂಡು ರೈತರಿಗೆ ಮಾರಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ನೇತೃತ್ವದ ತಂಡ 50 ಕೆ.ಜಿ. ತೂಕದ ಒಟ್ಟು 54 ಚೀಲಗಳನ್ನು ವಶಪಡಿಕೊಂಡಿದೆ.

ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಕೆ.ಎನ್. ಮಹಾರೆಡ್ಡಿ, ಕೃಷಿ ಅಧಿಕಾರಿಗಳಾದ ಬಸವರಾಜ ಮರಗಣ್ಣನವರ, ಶಿವಾನಂದ ಹಾವೇರಿ, ವೀರೇಶ ಜೆ.ಎಂ. ಹಾಗೂ ಪೊಲೀಸರು ದಾಳಿಯ ತಂಡದಲ್ಲಿದ್ದರು.

ಬೆಳಕು ಚೆಲ್ಲುವ ವರದಿ ಪ್ರಕಟಿಸಿದ ವಿಜಯವಾಣಿ...

ರಾಣೆಬೆನ್ನೂರ ತಾಲೂಕಿನಲ್ಲಿ ಖುಲ್ಲಾ ಹಾಗೂ ಕಳಪೆ ಬೀಜ ಮಾರಾಟ ಮಾಡಿ ರೈತರಿಗೆ ಮೋಸ ಮಾಡುತ್ತಿರುವ ಕುರಿತು ವಿಜಯವಾಣಿ ಪತ್ರಿಕೆ ಮೇ 28ರಂದು ನಕಲಿ ಬೀಜ ಖರೀದಿಸಿ ಮೋಸ ಹೋಗದಿರಿ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ರೈತರಿಗೆ ಆಗುತ್ತಿರುವ ಮೋಸದ ಕುರಿತು ಬೆಳಕು ಚೆಲ್ಲಿತ್ತು. ಕೂಡಲೇ ಎಚ್ಚೇತ್ತ ಅಧಿಕಾರಿಗಳು ಖುಲ್ಲಾ ಬೀಜ ವಶಪಡಿಸಿಕೊಂಡಿದ್ದಾರೆ.