ರಾಣೆಬೆನ್ನೂರ: ಸಂತೆ ಶುಲ್ಕ ವಸೂಲಾತಿ ವಿಚಾರವಾಗಿ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಹಾಗೂ ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ ನಡುವೆ ಮಾತಿನ ಚಕಮಕಿ ನಡೆದು ಉಪಾಧ್ಯಕ್ಷೆ ಸಭಾತ್ಯಾಗ ಮಾಡಿದ ಘಟನೆ ಸೋಮವಾರ ನಡೆಯಿತು.
ನಗರಸಭೆಯಲ್ಲಿ ಏರ್ಪಡಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ 2023-24ನೇ ಸಾಲಿನ ಸಂತೆ ಶುಲ್ಕ ವಸೂಲಾತಿಯ ವಿಚಾರ ಕುರಿತು ನಗರಸಭೆ ಸಿಬ್ಬಂದಿ ವಿಷಯ ಓದಿದರು.
‘ನಾಲ್ಕು ಬಾರಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿದ್ದರೂ ಕಳೆದ ಬಾರಿಯ ಹರಾಜು ದರ 42.01 ಲಕ್ಷ ರೂ. ತಲುಪಿಲ್ಲ. ಮೊದಲಿಗೆ 30 ಲಕ್ಷ ರೂ., ನಂತರ 32 ಲಕ್ಷ ರೂ., 33 ಲಕ್ಷ ರೂ. ಹಾಗೂ 4ನೇ ಬಾರಿಗೆ 35.55 ಲಕ್ಷ ರೂ.ಗೆ ಬಂದು ತಲುಪಿದೆ. ನಗರಸಭೆ ನಿರೀಕ್ಷಿಸಿದ್ದ ಅಂದಾಜು ಮೊತ್ತ 34.90 ಲಕ್ಷ ರೂ.ಗಿಂತ ಕೊನೆಯ ಹರಾಜಿನಿಂದ 65 ಸಾವಿರ ಉಳಿತಾಯವಾಗಲಿದ್ದು, ಸಭೆ ಇದಕ್ಕೆ ಅನುಮೋದನೆ ನೀಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪ್ರಕಾಶ ಪೂಜಾರ, ಕಳೆದ ವರ್ಷದ ದರಕ್ಕಿಂತ ಈ ವರ್ಷದ ದರ ಕಡಿಮೆಯಾಗಿದೆ. ಯಾರಾದರೂ ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೆ ನಾವು ಜವಾಬ್ದಾರಿ ಹೋರಲು ಸಿದ್ಧರಿಲ್ಲ. ಕೇವಲ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅವಸರವಾಗಿ ಅನುಮೋದನೆ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದರು. ಇದಕ್ಕೆ ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಸದಸ್ಯ ರಮೇಶ ಕರಡೆಣ್ಣನವರ ಧ್ವನಿಗೂಡಿಸಿದರು.
ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಕಳೆದ ಎರಡು ವರ್ಷ ನಗರಸಭೆಗೆ ಸಂತೆ ಶುಲ್ಕ ಹರಾಜಿನಿಂದ ಹೆಚ್ಚಿನ ಲಾಭವಾಗಿದೆ. ಆದರೆ, ಕಳೆದ ವರ್ಷ ಹರಾಜು ಪಡೆದುಕೊಂಡವರು ನಷ್ಟ ಅನುಭವಿಸಿದ್ದರಿಂದ ಪ್ರಸಕ್ತ ವರ್ಷ ಯಾರೋಬ್ಬರೂ ಹೆಚ್ಚಿನ ದರಕ್ಕೆ ಗುತ್ತಿಗೆ ಪಡೆಯಲು ಮುಂದೆ ಬರುತ್ತಿಲ್ಲ. ಆದ್ದರಿಂದ ಅನುಮೋದನೆ ಕೊಡಿ ಎಂದರು.
ಇದನ್ನು ಒಪ್ಪದ ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಪ್ರಸ್ತುತ ದರಕ್ಕೆ ಅನುಮೋದನೆ ನೀಡಿದಲ್ಲಿ ನಗರಸಭೆಗೆ 5 ಲಕ್ಷ ರೂ. ನಷ್ಟವಾಗುತ್ತದೆ. ಇ-ಪೋರ್ಟಲ್ ಮೂಲಕ ಹರಾಜು ಮಾಡಲು ಪ್ರಕಟಣೆ ನೀಡಿದರೆ, ಹೊರಗಿನವರು ಹೆಚ್ಚಿನ ದರಕ್ಕೆ ಕೂಗುವ ಸಾಧ್ಯತೆಯಿದೆ. ಆದ್ದರಿಂದ ಇನ್ನೊಂದು ಬಾರಿ ಟೆಂಡರ್ ಕರೆಯಿರಿ ಎಂದರು. ಈ ವಿಚಾರವಾಗಿ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮತ್ತು ಉಪಾಧ್ಯಕ್ಷೆ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ ತಮ್ಮ ಮಾತಿಗೆ ಸ್ಪಂದನೆ ದೊರಕದ ಕಾರಣ ಪ್ರಭಾವತಿ ತಿಳವಳ್ಳಿ, ಇದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿ ಹೊರಗೆ ನಡೆದರು.
ಕೊನೆಗೆ ಸಭಾತ್ಯಾಗ ಮಾಡಿದ ಅವರನ್ನು ಹೊರತು ಪಡಿಸಿ ಸಭೆ ಸರ್ವಾನುಮತದಿಂದ ಸಂತೆ ಶುಲ್ಕ ವಸೂಲಿ ಹರಾಜು ಪ್ರಕ್ರಿಯೆ ಅನುಮೋದನೆ ನೀಡಲಾಯಿತು. ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.