ಜಿಲ್ಲೆ

ರಾಣೆಬೆನ್ನೂರ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರು…!

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ರಾಣೆಬೆನ್ನೂರ: ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಗೆ ಇನ್ನೂ ಒಂದು ದಿನ ಬಾಕಿಯಿದೆ. ಆದರೆ, ವಾಣಿಜ್ಯ ನಗರಿ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಮೂವರು ಅಭ್ಯರ್ಥಿಗಳ ಸೋಲು-ಗೆಲುವಿನ ಮೇಲೆ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ.

ರಾಣೆಬೆನ್ನೂರ ಲೆಕ್ಕಾಚಾರ

ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿರುವ ಮತದಾರರು ತಾವು ಬೆಂಬಲಿಸಿದ ಅಭ್ಯರ್ಥಿಯೇ ಗೆಲ್ಲುವುದು ನಿಶ್ಚಿತ ಎಂದು ಬೆಟ್ಟಿಂಗ್‌ಗೆ ಇಳಿಯ ತೊಡಗಿದ್ದಾರೆ. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ, ಮತದಾರರಿಗೆ ಅಭ್ಯರ್ಥಿಗಳು ನೀಡಿರುವ ಆಮಿಷಗಳ ಕುರಿತ ಚರ್ಚೆ ಜೋರು ಪಡೆದುಕೊಂಡಿದೆ. ಇವುಗಳ ಲೆಕ್ಕಾಚಾರದ ಮೇಲೆ ಆಯಾ ಅಭ್ಯರ್ಥಿಗಳ ಹಿಂಬಾಲಕರು ಬೆಟ್ಟಿಂಗ್ ಕಟ್ಟತೊಡಗಿದ್ದಾರೆ.
ಕ್ಷೇತ್ರದ ಅಖಾಡದಲ್ಲಿ ಐದು ಅಭ್ಯರ್ಥಿಗಳಿದ್ದರೂ ಎನ್‌ಸಿಪಿ ಅಭ್ಯರ್ಥಿ ಆರ್. ಶಂಕರ, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕೋಳಿವಾಡ, ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರವಾಗಿ ಅತಿ ಹೆಚ್ಚು ಬೆಟ್ಟಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ. ಆರ್. ಶಂಕರ ಪರವಾಗಿ ಗಣ್ಯ ವ್ಯಕ್ತಿಯೊಬ್ಬರು ಕೋಟಿ ರೂ. ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನುವ ಮಾತು ಸಹ ಹರಿದಾಡುತ್ತಿವೆ.
ಸಣ್ಣಪುಟ್ಟ ವ್ಯಾಪಾರಸ್ಥರು, ಪಕ್ಷಗಳ ಕಾರ್ಯಕರ್ತರು ಸಾವಿರಾರು ರೂ. ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ವ್ಯಾಪಾರಸ್ಥರು, ರಾಜಕೀಯ ಮುಖಂಡರು ಲಕ್ಷಾಂತರ ರೂ.ಗೆ ಆಹ್ವಾನ ನೀಡುತ್ತಿದ್ದಾರೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಗುರುವಾರ ಬೆಟ್ಟಿಂಗ್ ಮಾತುಗಳು ಕೇಳಿಬಂದವು.
ಬೆಂಗಳೂರಿನಿಂದ ಬಂದಿರುವ ವ್ಯಕ್ತಿಯೊಬ್ಬರು ಎನ್‌ಸಿಪಿ ಅಭ್ಯರ್ಥಿ ಪರ 50 ಲಕ್ಷ ರೂ. ಬೆಟ್ಟಿಂಗ್‌ಗೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ.

ಯಾರ ಪರ, ಎಲ್ಲಿ ಜೋರು…?


ತಾಲೂಕಿನ ಮೇಡ್ಲೇರಿ ಹಾಗೂ ತುಮ್ಮಿನಕಟ್ಟಿಯಲ್ಲಿ ಮತ್ತು ನಗರದ ಕುರುಬಗೇರಿಯಲ್ಲಿ ಎನ್‌ಸಿಪಿ ಅಭ್ಯರ್ಥಿ ಆರ್. ಶಂಕರ ಪರವಾಗಿ ಲಕ್ಷಾಂತರ ರೂ. ಬೆಟ್ಟಿಂಗ್ ಕಟ್ಟಲಾಗಿದೆ. ನಗರದ ದೊಡ್ಡಪೇಟೆ, ತಾಲೂಕಿನ ಬಿಲ್ಲಳ್ಳಿ, ಮಾಕನೂರ ಸೇರಿ ಇತರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರವಾಗಿ ಬೆಟ್ಟಿಂಗ್ ಜೋರಾಗಿದೆ. ನಗರದ ದುರ್ಗಾ ಸರ್ಕಲ್, ಕೋಟೆ ಓಣಿ, ತಾಲೂಕಿನ ಯಕ್ಲಾಸಪುರ, ಕುಪ್ಪೇಲೂರ, ಕುಮಾರಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕೋಳಿವಾಡ ಪರವಾಗಿ ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನಲಾಗುತ್ತಿದೆ.