ಜಿಲ್ಲೆ

ಮುಸ್ಲಿಂ ಸಮಾಜದವರಿಂದ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಆಚರಣೆ

Haveri - Kariyappa Aralikatti

ರಾಣೆಬೆನ್ನೂರ: ತ್ಯಾಗ, ಬಲಿದಾನದ ಪ್ರತೀಕವಾದ ಹಾಗೂ ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಇಲ್ಲಿನ ಮಾರುತಿ ನಗರದ ಈದ್ಗಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಸಮಾಜ ಬಾಂಧವರು ಮೌಲ್ವಿಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಬಾಲವೃದ್ಧರಾಗಿ ಎಲ್ಲರೂ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೌಲ್ವಿಗಳು ಸಮಾಜ ಬಾಂಧವರಿಗೆ ಹಬ್ಬದ ಮಹತ್ವ ಹಾಗೂ ಇಸ್ಲಾಂ ಧರ್ಮದ ತತ್ವಗಳ ಕುರಿತು ಉಪದೇಶ ನೀಡಿದರು. ನಂತರ ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು.
ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಚ್.ಎಫ್. ಬಿದರಿ, ಉಪಾಧ್ಯಕ್ಷ ಜಬೀವುಲ್ಲಾ ದಾವಣಗೆರೆ, ಕಾರ್ಯದರ್ಶಿ ರಫೀಕ್ ಮೆಣಸಿನಕಾಯಿ, ಖಜಾಂಚಿ ಆರ್.ಬಿ. ಕುಪ್ಪೇಲೂರ, ಸದಸ್ಯರಾದ ಬಾಬಾಸಾಬ ಹಾವನೂರ, ಅತಾವುಲ್ಲಾ ಉದಗಟ್ಟಿ, ಅಬ್ದುಲ್ ವಹಾಬ್ ಶಾಫಿ, ನೂರಾಲ್ಲಾ ಖಾಜಿ ಮತ್ತಿತರರು ಪಾಲ್ಗೊಂಡಿದ್ದರು.