ಜಿಲ್ಲೆ

ಮಲ್ಟಿಸ್ಪೆಷಾಲಿಟಿ ಕಟ್ಟಡದಿಂದ ಐತಿಹಾಸಿಕ ಪಟ್ಟಣ ಮರೆ: ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಬೇಸರ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಲ್ಟಿಸ್ಪೆಷಾಲಿಟಿ ಕಟ್ಟಡ ಹೆಚ್ಚಾಗುತ್ತಿರುವುದರಿಂದ ಶ್ರೀರಂಗಪಟ್ಟಣದ ಐತಿಹಾಸಿಕತೆ ಮರೆಯಾಗುತ್ತಿದೆ. ಆದ್ದರಿಂದ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಹೇಳಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಾಹಿತಿ ಗಣಂಗೂರು ನಂಜೇಗೌಡ ಅವರ ’ರಣಧೀರ ಕಂಠೀರವ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದ ಅವರು, ಕೋಟೆನಾಡಿನಲ್ಲಿ ದೇವಾಲಯಗಳ ಗೋಪುರ, ಕರಿಘಟ್ಟದ ವೈಭವ ನಶಿಸುತ್ತಿದೆ. ಐತಿಹಾಸಿಕ ಪಟ್ಟಣಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು. ದೇವಾಲಯಗಳಲ್ಲಿ ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿಯಿದ್ದು ಅವುಗಳ ಸಂರಕ್ಷಣೆ ನಮ್ಮೆಲರ ಜವಾಬ್ದಾರಿಯಾಗಬೇಕು. ಶ್ರೀರಂಗಪಟ್ಟಣವನ್ನು ಐತಿಹಾಸಿಕವಾಗಿ ನೋಡುವ ಮೂಲಕ ಸರ್ಕಾರಕ್ಕೆ ಆದಾಯ ಬರುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವುದು ಅಗತ್ಯವಿದೆ ಎಂದು ಸಲಹೆ ನೀಡಿದರು.

ಮೈಸೂರು ಅರಸರಲ್ಲಿ ಸುಮಾರು 20 ರಾಜರು ಪ್ರಮುಖರಾಗಿ ಕಾಣುತ್ತಾರೆ. ಏಕೆಂದರೆ ಪ್ರಜೆಗಳ ಕಷ್ಟಗಳನ್ನು ಅರಿತಿದ್ದರು. ಮೈಸೂರು ಸಂಸ್ಥಾನವನ್ನು ಕಟ್ಟಿದ ರಾಜ ಒಡೆಯರ್, ನಂತರದಲ್ಲಿ ರಣಧೀರ ಕಂಠೀರವ, ದೇವರಾಜ ಒಡೆಯರ್, ಚಿಕ್ಕರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್ ಇವರ ಆಡಳಿತದ ನಂತರ ದಳವಾಯಿಗಳ ಪ್ರಾಬಲ್ಯ ಜಾಸ್ತಿಯಾಗಿ ಐದರ್ ಟಿಪ್ಪುಗಳ ಆಡಳಿತ ಪ್ರಾರಂಭವಾಯಿತು. ಕಡೆಯದಾಗಿ ಬಲಿಷ್ಠವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಕಾಣಸಿಗುತ್ತಾರೆ ಎಂದರು.

ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ಉರೀಗೌಡ, ನಂಜೇಗೌಡ ಎಂಬುವವರು ಟಿಪ್ಪು ಸುಲ್ತಾನ್ ಅವರನ್ನು ಸಾಯಿಸಿದರು ಎಂಬ ಹೇಳಿಕೆ ಮೂಲಕ ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ, ಇದು ಸುಳ್ಳು ಎಂಬುದನ್ನು ಅಂದೇ ಹೇಳಿದ್ದೆವು. ಈ ಕಾಲದಲ್ಲಿಯೂ ಸುಳ್ಳು ಚರಿತ್ರೆಗಳನ್ನು ಓದುವ ಕರ್ಮ ನಮ್ಮದಾಗಿದೆ. ವಚನ ದರ್ಶನ ಎಂಬ ಪುಸ್ತಕ ಹೊರತಂದು ಇಡೀ ಬಸವಣ್ಣ ಅವರ ಆಲೋಚನೆಗಳ ಕ್ರಮವನ್ನೇ ಒಡೆದು ಬಿಸಾಕಿದ್ದಾರೆ. ಇಂತಹ ಕುತಂತ್ರವನ್ನು ಕ್ಷಮಿಸಲು ಸಾಧ್ಯವೇ?. ಜಿಲ್ಲೆಯಲ್ಲಿ ಒಕ್ಕಲಿಗರು ಹೆಚ್ಚಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಅಶಾಂತಿ ಉಂಟು ಮಾಡಲು ರಾಮಜಪ ಮತ್ತು ಆಂಜನೇಯನ ಹೆಸರೇಳಿಕೊಂಡು ಒಂದು ಪಕ್ಷದವರು ತಂತ್ರ ಮಾಡುತ್ತಿದ್ದಾರೆ. ಮಂಡ್ಯ ಜನ ಒರಟಾಗಿ ಕಂಡರೂ ಸಹ ಹೃದಯವಂತಿಕೆ ಉಳ್ಳವರು ಹಾಗಾಗಿ ಇವರ ಮುಂದೆ ಜಾತಿ ಆಟ ನಡೆಯಲ್ಲ. ಮೈಸೂರಿನ ಮಾಜಿ ಸಂಸದರೊಬ್ಬರು ಮೈಸೂರಿನ ಹುಲಿ ಎಂಬ ಹೆಸರು ಕೊಟ್ಟವರು ಯಾರು ಎನ್ನುತ್ತಾರೆ. ಆದರೆ ಜನಪದ ಕವಿಗಳು ಮತ್ತು ಲಾವಣಿ ಜನರು ಹಾಡಿನಲ್ಲಿ ಬಿರುದು ಕೊಟ್ಟಿದ್ದಾರೆ. ಇವರು ಸುಳ್ಳು ಹೇಳುವ ಜನರಲ್ಲ, ಟಿಪ್ಪು ಕನ್ನಡಪರವಾಗಿದ್ದರು. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಕೃತಿ ಬಿಡುಗಡೆ ಮಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಚಿಂತಕ ತುಕಾರಾಂ, ಅಲಯನ್ಸ್ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಕೃತಿ ಕರ್ತೃ ಗಣಂಗೂರು ನಂಜೇಗೌಡ ಇದ್ದರು.