ಜಿಲ್ಲೆ

ಚುನಾವಣೆ ರಣತಂತ್ರಕ್ಕೆ ಕೈ ಮುನ್ನುಡಿ: ಬೆಳಗಾವಿಯಲ್ಲಿ ನಾಳೆ ಸುರ್ಜೆವಾಲ ಸಭೆ

ಬೆಂಗಳೂರು: ವಿಧಾನಸಭೆ ಅಧಿವೇಶನದ ಹೊತ್ತಿನಲ್ಲಿ ಚುನಾವಣೆ ಸಂಬಂಧಿ ರಾಜಕೀಯ ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಬೆಳಗಾವಿಯಲ್ಲಿ ಭಾನುವಾರ ಸಂಜೆ ಕಾಂಗ್ರೆಸ್ ರಾಜ್ಯ ಚುನಾವಣೆ ಸಮಿತಿ ಸಭೆ ನಡೆಯಲಿದೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚುನಾವಣೆ ಸಮಿತಿ ಮೊದಲ ಸಭೆ ಕರೆದಿದ್ದು, ಮೂರು ದಿನಗಳ ಹಿಂದಷ್ಟೇ ಎಐಸಿಸಿ ರಚಿಸಿದ್ದ ಸಮಿತಿಯ 42 ಸದಸ್ಯರು ಪಾಲ್ಗೊಳ್ಳುವರು.

ಟಿಕೆಟ್ ಹಂಚಿಕೆ, ಪ್ರಚಾರ ಸಭೆ, ಹೋರಾಟಗಳು, ಚುನಾವಣೆ ತಂತ್ರಗಾರಿಕೆ, ಬಿಜೆಪಿಗೆ ಪ್ರತಿರೋಧ ಒಡ್ಡುವ ಕುರಿತಂತೆ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿಯಾಗಿ ನಡೆಸಲಿರುವ ಬಸ್ ಯಾತ್ರೆಗೆ ಈ ಸಮಿತಿ ಅಂತಿಮ ಮುದ್ರೆ ಒತ್ತಲಿದೆ.

ಸಭೆಯಲ್ಲಿ ಪ್ರಮುಖವಾಗಿ ಬಿಜೆಪಿಯ ನೀತಿ ನಿಲುವುಗಳು, ಅದರಿಂದ ಚುನಾವಣೆ ಮೇಲೆ ಬೀರುವ ಪರಿಣಾಮಗಳು, ಅದಕ್ಕೆ ಕಾಂಗ್ರೆಸ್ ಕಡೆಯಿಂದ ನೀಡಬೇಕಾದ ತಿರಗೇಟುಗಳ ಕುರಿತು ಚರ್ಚೆಯಾಗಲಿವೆ.

ಚುನಾವಣೆ ಸಮಿತಿಯ ಜವಾಬ್ದಾರಿಗಳು ಸಹ ಇದೇ ವೇಳೆ ನಿರ್ಧಾರವಾಗಲಿದೆ. ಸಭೆ ನಡೆಸುವುದು ಹಾಗೂ ಟಿಕೆಟ್ ಹಂಚಿಕೆ ವಿಚಾರವಾಗಿ ಅಭಿಪ್ರಾಯ ನೀಡಲು ಉಪ ಸಮಿತಿಗಳನ್ನು ರಚಿಸುವ ಸಾಧ್ಯತೆಯೂ ಇದೆ.

surjevala