ರಾಮನಗರ: ಅಳಿವಿನಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದುಗಳ ಸಂತತಿ ಸಂರಕ್ಷಿಸಿ ಅವುಗಳನ್ನು ಹೆಚ್ಚಿಸುವ ಸಲುವಾಗಿ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ತೆರೆಯುವ ಅರಣ್ಯ ಇಲಾಖೆ ಪ್ರಸ್ತಾವನೆಗೆ ಕೊನೆಗೂ ರಾಜ್ಯ ಸರ್ಕಾರ ಮನ್ನಣೆ ನೀಡಿದ್ದು ಈ ಬಾರಿ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು 2 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ರಾಸುಗಳಿಗೆ ಬಳಕೆ ಮಾಡಲಾಗುತ್ತಿದ್ದ ಡೈಕ್ಲೋಫೆನೆಕ್ ಔಷಧದಿಂದಾಗಿ ಬಹುತೇಕ ಕಣ್ಮರೆಯಾಗಿರುವ ರಣಹದ್ದುಗಳನ್ನು ಉಳಿಸಿಕೊಳ್ಳಲು ರಾಮನಗರದಲ್ಲಿ ಸಂತಾನೋತ್ಪತ್ತಿ ಕೇಂದ್ರ ಆರಂಭಿಸುವ ಸಂಬಂಧ 2019ರ ಜುಲೈನಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ, ರಾಜ್ಯ ಅರಣ್ಯ ಇಲಾಖೆ ಕೇಂದ್ರ ಕಚೇರಿಗೆ ವಿಸ್ತೃತ ಯೋಜನಾ ವರದಿ ಕಳುಹಿಸಲಾಗಿತ್ತು.
ಬಿಎನ್‌ಎಚ್‌ಎಸ್ ನೆರವು: ಬಾಂಬೆ ನಾಚುರಲ್ ಹಿಸ್ಟ್ರಿ ಸೊಸೈಟಿಯ (ಬಿಎನ್‌ಎಚ್‌ಎಸ್) ಉಪ ನಿರ್ದೇಶಕ ಡಾ.ವಿಬು ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಸಂತಾನೋತ್ಪತ್ತಿ ಕೇಂದ್ರಕ್ಕೆ ಬೇಕಾದ ಮಾರ್ಗದರ್ಶನ ಮತ್ತು ತಜ್ಞರ ನೆರವನ್ನು ಬಿಎನ್‌ಎಚ್‌ಎಸ್ ನೀಡಲಿದೆ.
ಸಂತಾನೋತ್ಪತ್ತಿ ಕೇಂದ್ರ: ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ 15 ವರ್ಷಗಳ ಯೋಜನೆಯಾಗಿದ್ದು, ಪ್ರಸ್ತುತ ಇರುವ ರಣಹದ್ದು ಧಾಮದಿಂದ ಕನಿಷ್ಠ 5 ಕಿಮೀ ದೂರದಲ್ಲಿ ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ ಮಾಡಬೇಕಿದೆ. ಮೊದಲಿಗೆ ಕನಿಷ್ಠ 25 ಜೊತೆ ಉದ್ದ ಕೊಕ್ಕಿನ ರಣಹದ್ದುಗಳನ್ನು ಸಂತಾನೋತ್ಪತ್ತಿ ಗಾಗಿ ಬಳಕೆ ಮಾಡಿಕೊಳ್ಳಲು ಯೋಜನೆಯಲ್ಲಿ ವಿವರಿಸಲಾಗಿದೆ. ಸಂತಾನೋತ್ಪತ್ತಿಗೆ ಬಳಕೆ ಮಾಡುವ ರಣಹದ್ದುಗಳನ್ನು ಮತ್ತು ಇವುಗಳಿಂದ ಪಡೆದ ಮರಿಗಳನ್ನು ತಜ್ಞರ ನಿಗಾವಣೆಯಲ್ಲಿ ಇಟ್ಟು ಅವುಗಳ ಚಲನ-ವಲನಗಳನ್ನು ಸಂಪೂರ್ಣ ತಿಳಿದುಕೊಂಡ ಮೇಲೆ ಅವುಗಳನ್ನು ಸ್ವತಂತ್ರಗೊಳಿಸಲಾಗುತ್ತದೆ. ಹೀಗೆ ಮಾಡಲು ಕನಿಷ್ಠ 6-7 ವರ್ಷಗಳು ಬೇಕಾಗುತ್ತದೆ.
ಅಳಿವಿನಂಚಿನಲ್ಲಿದೆ: ದೇಶದಲ್ಲಿ ಸುಮಾರು 40 ಮಿಲಿಯನ್‌ನಷ್ಟಿದ್ದ ವಿವಿಧ ಜಾತಿಯ ರಣಹದ್ದುಗಳ ಸಂಖ್ಯೆ ಕಳೆದ ಮೂರು ದಶಕಗಳಿಂದೀಚೆಗೆ ಕೇವಲ 19 ಸಾವಿರಕ್ಕೆ ಬಂದು ನಿಂತಿದೆ. ಪ್ರಸ್ತುತ ದೇಶದಲ್ಲಿ ವೈಟ್ ಬ್ಯಾಕ್ಡ್ ವಲ್ಚರ್ 6 ಸಾವಿರ, ಲಾಂಗ್ ಬಿಲ್ಲಡ್ ವಲ್ಚರ್ 12 ಸಾವಿರ ಮತ್ತು ಸ್ಲೆಂಡೆಡ್ ಬಿಲ್ಲಡ್ ವಲ್ಚರ್ ಕೇವಲ ಒಂದು ಸಾವಿರ ಸಂಖ್ಯೆಗೆ ಇಳಿದಿವೆ. ರಾಮನಗರ ರಾಮದೇವರ ಬೆಟ್ಟದಲ್ಲೂ ಸಾವಿರ ಲೆಕ್ಕದ್ದಲ್ಲಿದ್ದ ರಣಹದ್ದುಗಳು ಈಗ ಬೆರಳೆಣಿಕೆಯಷ್ಟಿವೆ. ಜತೆಗೆ ಕಳೆದ ನಾಲ್ಕು ವರ್ಷಗಳಿಂದ ಸಂತಾನೋತ್ಪತ್ತಿ ನಡೆಸುವ ಯಾವುದೇ ಚಟುವಟಿಕೆ ಕಂಡು ಬಂದಿಲ್ಲ.
ಕೂಡಲೇ ಆಗಬೇಕಿದೆ: ಸರ್ಕಾರ ಬಜೆಟ್‌ನಲ್ಲಿ 2 ಕೋಟಿ ರೂ. ಗಳನ್ನು ಕೇಂದ್ರ ಸ್ಥಾಪಿಸಲು ಮೀಸಲಿಟ್ಟಿದೆ. ಪ್ರಸ್ತುತ ಸನ್ನಿವೇಶದಲ್ಲಿ ರಣಹದ್ದುಗಳ ಸಂತತಿ ಹೆಚ್ಚಿಸುವ ಅಗತ್ಯವಿದೆ. ಪರಿಸರದಲ್ಲಿ ಸಮತೋಲನ ಕಾಪಾಡಲು ರಣಹದ್ದುಗಳ ಉಳಿವು ಮತ್ತು ಬೆಳವಣಿಗೆ ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಇಲಾಖೆ ತ್ವರಿತ ಗತಿಯಲ್ಲಿ ಯೋಜನೆ ಜಾರಿಗೆ ಮುಂದಾಗಬೇಕಿದೆ.
ರಾಮನಗರದಲ್ಲಿ ಧಾಮ: ಉದ್ದ ಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿರುವ ರಾಮನಗರದ ಶ್ರೀ ರಾಮದೇವರ ಬೆಟ್ಟವನ್ನೂ ಒಳಗೊಂಡ ಸುಮಾರು 800 ಹೆಕ್ಟೇ ಪ್ರದೇಶವನ್ನು ರಣಹದ್ದು ಧಾಮವೆಂದು 2012ರಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರ 2017ರ ಸೆ.12ರಂದು ರಣಹದ್ದು ಧಾಮವನ್ನು ಪರಿಸರ ಸೂಕ್ಷ್ಮ ವಲಯ (ಎಕೋ ಸೆನ್ಸಿಟೀವ್ ರೆನ್) ಎಂದು ಘೋಷಣೆ ಮಾಡಿ, ರಣಹದ್ದು ಧಾಮಕ್ಕೆ ಹೊಂದಿಕೊಂಡಿರುವ 700ಕ್ಕೂ ಹೆಚ್ಚು ಹೆಕ್ಟೇರ್ ಇದರ ವ್ಯಾಪ್ತಿಗೆ ಸೇರಿಸಿತ್ತು.
ರಾಜ್ಯದಲ್ಲಿ ಮೊದಲು: ರಾಜ್ಯ ಸರ್ಕಾರ ಬ್ರೀಡಿಂಗ್ ಕೇಂದ್ರ ಸ್ಥಾಪನೆಗೆ ಹಸಿರು ನಿಶಾನೆ ತೋರಿರುವುದರಿಂದ ದೇಶದ ನೈಋತ್ಯ ರಾಜ್ಯದಲ್ಲಿ ಪ್ರಾರಂಭಗೊಳ್ಳುವ ಪ್ರಥಮ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಇದಾಗಲಿದೆ. ದೇಶದಲ್ಲಿ ಹರಿಯಾಣದ ಪಿಂಜೋರ್, ಪಶ್ಚಿಮ ಬಂಗಾಳದ ರಾಜಾಭಟ್ಕವಾ, ಅಸ್ಸಾಂನ ರಾಣಿ, ಮಧ್ಯಪ್ರದೇಶದ ಭೋಪಾಲ್‌ನ ಕೆರ‌್ವಾ ಹಾಗೂ ಗುಜರಾತ್‌ನ ಗುಜಾಗರ್, ಒಡಿಶಾದ ನಂದನ್‌ಕಾನನ್, ತೆಲಂಗಾಣದ ಹೈದರಾಬಾದ್, ಬಿಹಾರದ ರಾಂಚಿಯ ಮುತಾ ಬಳಿ ಸಂತ್ಪಾನೋತ್ಪತ್ತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಪರಿಸರಕ್ಕೆ ಪೂರಕವಾದ ರಣಹದ್ದುಗಳ ಸಂತತಿ ಉಳಿಸಿ ಹೆಚ್ಚಿಸಲು ಬ್ರೀಡಿಂಗ್ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಸಂತಸದ ವಿಚಾರ. ಇದು ಬಜೆಟ್‌ನಲ್ಲಿ ಘೋಷಣೆಗೆ ಸೀಮಿತವಾಗದೆ ಶೀಘ್ರವೇ ಕಾರ್ಯರೂಪಕ್ಕೆ ಬರಬೇಕಿದೆ. ಈಗಾಗಲೇ ರಣಹದ್ದುಗಳ ಸಂಖ್ಯೆ ಕ್ಷೀಣಿಸುತ್ತಿದೆ. -ಬಿ.ಶಶಿಕುಮಾರ್, ಕಾರ್ಯದರ್ಶಿ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್