ಜಿಲ್ಲೆ

ಕರೊನಾ ಮುಕ್ತ ರಂಜಾನ್‌ಗೆ ಕೌಂಟ್‌ಡೌನ್

Dakshina Kannada

ಅನ್ಸಾರ್ ಇನೋಳಿ ಉಳ್ಳಾಲ

ಎರಡು ವರ್ಷ ಕರೊನಾ ಲಾಕ್‌ಡೌನ್‌ನಿಂದ ವಿಶ್ವವೇ ತತ್ತರಿಸಿದ್ದು ಅದರ ಇಫೆಕ್ಟ್ ಮುಸ್ಲಿಮರ ಪವಿತ್ರ ತಿಂಗಳು ರಂಜಾನ್‌ಗೂ ತಟ್ಟಿತ್ತು. ಈ ಬಾರಿ ಎಲ್ಲ ಆತಂಕಗಳು ದೂರವಾಗಿದ್ದು ಅದ್ದೂರಿಯಾಗಿ ರಂಜಾನ್ ಸ್ವಾಗತಕ್ಕೆ ಮುಸ್ಲಿಮರು ಸಿದ್ಧತೆ ನಡೆಸಿದ್ದಾರೆ.

ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಬರುವ ಒಂಬತ್ತನೇ ತಿಂಗಳು ರಂಜಾನ್. ಜೀವಮಾನವಿಡೀ ಮಾಡಿದ ಪಾಪ ಮುಕ್ತಿಗೆ ಈ ತಿಂಗಳು ಪರಿಹಾರ ಎನ್ನುವುದು ಗ್ರಂಥಗಳಲ್ಲಿ ಉಲ್ಲೇಖವಿದೆ. ಈ ತಿಂಗಳು ಪ್ರಾತಃಕಾಲದಿಂದ ಮುಸ್ಸಂಜೆವರೆಗೆ 14 ತಾಸು ನೀರನ್ನೂ ಸೇವಿಸದೆ ವ್ರತಾನುಷ್ಠಾನ ಮಾಡಬೇಕಾಗುತ್ತದೆ. ದೇವಾರಾಧನೆ, ದಾನಕ್ಕೆ ಮೊದಲ ಆದ್ಯತೆ. ತಿಂಗಳ ಕೊನೆಯಲ್ಲಿ ಕಡ್ಡಾಯ ದಾನವೂ ನಡೆಯುತ್ತದೆ. ಅಪ್ರಾಪ್ತರು, ಬುದ್ಧಿಮಾಂದ್ಯರು, ರೋಗಿಗಳು, ಬಾಣಂತಿಯರಿಗೆ ರಿಯಾಯಿತಿ ಇದೆ. ಉಳಿದವರಿಗೆ ವ್ರತಾನುಷ್ಠಾನ ಕಡ್ಡಾಯ. ಈ ತಿಂಗಳಾರಂಭ ಚಂದ್ರ ದರ್ಶನದ ಮೂಲಕ ನಿರ್ಧಾರವಾಗಲಿದೆ. ಶನಿವಾರ ರಾತ್ರಿ ಚಂದ್ರದರ್ಶನವಾದರೆ ಶಾಬಾನ್ ತಿಂಗಳು ಕೊನೆಯಾಗಿ ಭಾನುವಾರದಿಂದ ರಂಜಾನ್ ಆರಂಭಗೊಳ್ಳಲಿದೆ. ಶನಿವಾರ ಚಂದ್ರದರ್ಶನ ಆಗದಿದ್ದರೆ ಸೋಮವಾರದಿಂದ ರಂಜಾನ್ ಆರಂಭಗೊಳ್ಳಲಿದೆ.

ಈ ಬಾರಿ ಹಿಂದಿಗಿಂತ ಹೆಚ್ಚು ಬಿಸಿಲು ಇರುವುದರಿಂದ ರಂಜಾನ್ ಕಠಿಣ ಎನಿಸಲಿದೆ. ಇದ್ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳದೆ ಧಾರ್ಮಿಕ ನಿಯಮ ಪಾಲನೆಯತ್ತ ಮುಸ್ಲಿಮರು ಮುಖ ಮಾಡುತ್ತಾರೆ. ಕಳೆದ ವರ್ಷ ರಂಜಾನ್‌ಗೆ 10 ದಿನಗಳಿರುವಾಗ ಕಠಿಣ ಲಾಕ್‌ಡೌನ್ ಜಾರಿಗೆ ಬಂದಿದ್ದರೆ, ಹಿಂದಿನ ವರ್ಷ ರಂಜಾನ್‌ಗೆ ಎರಡು ತಿಂಗಳು ಮೊದಲೇ ಜಾರಿಗೆ ಬಂದಿದ್ದ ಲಾಕ್‌ಡೌನ್ ಬಳಿಕವೂ ಮುಂದುವರಿದಿತ್ತು. ಈ ಅವಧಿಯಲ್ಲಿ ಮಸೀದಿಗಳು ಬಂದ್ ಆಗಿದ್ದರಿಂದ ವಿಶೇಷ ಪ್ರಾರ್ಥನೆ ಸಹಿತ ಇತರ ಕರ್ಮಗಳು ಮನೆಗೇ ಸೀಮಿತವಾಗಿದ್ದವು. ಜನರು ಕೆಲಸವಿಲ್ಲದೆ ಮನೆಯಲ್ಲೇ ಉಳಿದಿದ್ದರು. ಆರ್ಥಿಕ ಬಲಾಢ್ಯರು ಲಾಕ್‌ಡೌನ್ ವೇಳೆ ಆಹಾರ ಸಾಮಗ್ರಿ ಕಿಟ್ ಸಹಿತ ಇತರ ವಸ್ತುಗಳನ್ನು ವಿತರಿಸಿದ್ದ ಪರಿಣಾಮ ರಂಜಾನ್ ಕಿಟ್‌ಗಳ ಕೊರತೆ ಕಂಡು ಬಂದಿತ್ತು. ಕಳೆದ ವರ್ಷವೂ ಇದೇ ಪರಿಸ್ಥಿತಿ ಇತ್ತು.

ಕಳೆದೆರಡು ವರ್ಷ ಕರೊನಾದಿಂದ ರಂಜಾನ್ ಕಳೆಗುಂದಿದ್ದು ಈ ಬಾರಿ ಎಲ್ಲ ಕಂಟಕ ದೂರವಾಗಿರುವುದು ನೆಮ್ಮದಿ ತಂದಿದೆ. ಕರೊನಾ ನಡುವೆ ಉರುಸ್ ಕೂಡ ನಡೆಸಲಾಗಿದೆ. ರಂಜಾನ್‌ನಲ್ಲಿ ಮುಸಲ್ಮಾನ ಬಂಧುಗಳು ಹಿಂದಿನ ಎಲ್ಲ್ಲ ದ್ವೇಷ, ನಡೆದ ಘಟನೆಗಳನ್ನು ಮರೆತು ಶಾಂತಿ, ಸೌಹಾರ್ದ, ಪರಸ್ಪರ ಪ್ರೀತಿ, ವಿಶ್ವಾಸದ ಜೀವನಕ್ಕೆ ಪಣ ತೊಡಬೇಕು’

ಅಬ್ದುಲ್ ರಶೀದ್ ಅಧ್ಯಕ್ಷ, ಉಳ್ಳಾಲ ದರ್ಗಾ

ಬಿಸಿಲು ಜಾಸ್ತಿ ಇರುವುದರಿಂದ ರಂಜಾನ್ ವೇಳೆ ಮೀನು, ಮಾಂಸ ಸೇವನೆಯಿಂದ ಉರಿಮೂತ್ರ ಬರುವ ಸಾಧ್ಯತೆ ಇದ್ದು, ಹಣ್ಣು, ಹಣ್ಣಿನ ರಸ ಹೆಚ್ಚಾಗಿ ಸೇವಿಸುವುದು ಉತ್ತಮ. ಬೆಳಗಿನ ಜಾವ ಮತ್ತು ಇಫ್ತಾರ್ ವೇಳೆ ನೇರ ಮಾಂಸಾಹಾರ ಸೇವಿಸುವ ಬದಲು ಬಿಸಿಯಾದ ಅನ್ನಾಹಾರ, ತರಕಾರಿ ಸೇವನೆ ಮುಖ್ಯ. ಇದರೊಂದಿಗೆ ಕೋವಿಡ್ ನಿಯಮ ಪಾಲಿಸುವ ಮೂಲಕ ಸಣ್ಣಪುಟ್ಟ ಕಾಯಿಲೆಗಳಿಂದ ದೂರ ಇರುವುದು ಒಳ್ಳೆಯದು.

ಪ್ರೊ.ನಂಜೇಶ್ ಕುಮಾರ್ ಎಸ್. ಮುಖ್ಯಸ್ಥರು, ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಮುದಾಯ ವೈದ್ಯಕೀಯ ವಿಭಾಗ