ಜಿಲ್ಲೆ

ರಾಮು ಪದ್ಯಗಳು ಬಹಿರಂಗದ ಭಾಷಣಗಳಲ್ಲ

ಮಂಜುನಾಥ ತಿಮ್ಮಯ್ಯ

ಮೈಸೂರು: ಕವಿ ಹಾಡುಪಾಡು ರಾಮು ಅವರ ಪದ್ಯಗಳು ಬಹಿರಂಗದ ಭಾಷಣಗಳಲ್ಲ. ಮನಸ್ಸಿನ ಒಳಗಡೆ ತೆಗೆದುಕೊಳ್ಳಬೇಕಾದವು. ಒಂದು ರೀತಿ ಆತ್ಮಸಂಗ ಎಂದು ಕವಯತ್ರಿ ಚ. ಸರ್ವಮಂಗಳಾ ಅಭಿಪ್ರಾಯಪಟ್ಟರು.


ಸುಶೀಲಮ್ಮ ಕುಟುಂಬ ಮತ್ತು ಅರ್ಹನಿಶಿ ಪ್ರಕಾಶನದ ವತಿಯಿಂದ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ನುಡಿಯ ಬಾಗಿಲ ಹಾಯ್ದು’ ಕವಿತೆ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.


ಪಾಲಕರು ಮಕ್ಕಳನ್ನು ಕಳೆದುಕೊಳ್ಳುವುದು, ಗುರುಗಳು ಶಿಷ್ಯರನ್ನು ಕಳೆದುಕೊಳ್ಳುವುದು ಕರುಳಿಗೆ ಬೆಂಕಿ ಇಟ್ಟಂತೆ. ರಾಮ ಮತ್ತು ರಾಮುಗೆ ತುಂಬ ವ್ಯತ್ಯಾಸ ಇದೆ. ರಾಮು ಯಾವತ್ತೂ ರಾಮ ಆಗಲಿಲ್ಲ. ಆಪ್ತ ಸಮಾಲೋಚಕನಂತೆ ನಮ್ಮೊಡನೆ ಇದ್ದ ಎಂದು ತಿಳಿಸಿದರು.


ಸಾಹಿತಿ ಡಾ.ರಹಮತ್ ತರಿಕೆರೆ ಮಾತನಾಡಿ, ರಾಮು ಒರಿಜನಲ್ ಥಿಂಕರ್. ಹೆಚ್ಚು ಬರೆಯಲಿಲ್ಲ. ಕಿರಿಯ ಲೇಖಕರನ್ನು ಬೆಳೆಸುವ ತಾಯಿ ಗುಣ ಅವರಲ್ಲಿತ್ತು. ವಿನೋದದಲ್ಲಿ ಕತ್ತಿ ಬೀಸುತ್ತಿದ್ದರು. ಸರಸ್ವತಿಪುರಂನ ಅವರ ಮನೆ ನಮ್ಮ ತಲೆಮಾರಿನ ಕಾಫಿ ಹೌಸ್ ಆಗಿತ್ತು. ಅಲ್ಲಿ ನಾವೆಲ್ಲರೂ ಬೆಳೆದೆವು ಎಂದು ಹೇಳಿದರು.


ಮೈಸೂರಲ್ಲಿ ನನ್ನ ಪಾಲಿಗೆ ದೀಪಗಳಂತಿದ್ದ ಪಂಡಿತ್ ರಾಜೀವ್ ತಾರಾನಾಥ್ ಮತ್ತು ರಾಮು ಇಬ್ಬರು ಅಗಲಿದ್ದಾರೆ. ರಾಜೀವ್ ತಾರಾನಾಥ್ ಜಗತ್ತನ್ನು ಸುತ್ತಿದ್ದರು. ರಾಮು ಸುತ್ತಾಡಲಿಲ್ಲ. ಅದು ನನ್ನ ಪಾಲಿಗೆ ಅಚ್ಚರಿಯಾಗಿತ್ತು. ಕನ್ನಡದ ಮುಖ್ಯ ಲೇಖಕರು ತಿರುಗಾಡಿ ಮತ್ತು ತಿರುಗಾಡದೆಯೂ ವಿಶ್ವಾತ್ಮಾಕ ತಿಳಿವಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.


ವಿಮರ್ಶಕ ರಾಜೇಂದ್ರ ಚೆನ್ನಿ ಮಾತನಾಡಿ, ಸೃಷ್ಟಿಶೀಲತೆ ನಿಸರ್ಗದ ಒಡಲಿನಲ್ಲೇ ಇದೆ. ಅದನ್ನು ದೇವರು ಬದಲಾಯಿಸಲಾಗಲ್ಲ ಎಂದು ನಂಬಿದ್ದ ರಾಮು ಅವರಲ್ಲಿ ಸೃಜನಶೀಲತೆ, ಸೃಷ್ಟಿಶೀಲತೆಯ ಜತೆಗೆ ಎಚ್ಚರವೂ ಇತ್ತು. ಕವಿ ಬೇಂದ್ರೆಯವರಂತೆ ಕೊನೆವರೆಗೂ ತಾಯಿ ಧ್ಯಾನ ಮಾಡಿದರು ಎಂದು ಹೇಳಿದರು.
ವಿಮರ್ಶ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಮಾತನಾಡಿ, ಕವಿತೆ ಜಾಹೀರಾತು ಮಾಡಿಕೊಳ್ಳಬಾರದು. ತಾನಾಗಿಯೇ ಅವರಿಗೆ ಸಿಗುವಂತಾಗಬೇಕು ಎಂದು ರಾಮು ನಂಬಿದ್ದರು ಎಂದರು.


ಲೇಖಕಿ ಜ.ನಾ.ತೇಜಶ್ರೀ ಮಾತನಾಡಿ, ಹಾಡುಪಾಡು ರಾಮು ಅವರು ಕಾವ್ಯ ಮತ್ತು ಬದುಕಿನ ನೂರಾರು ರೂಢಿಗಳನ್ನು ಮುರಿದವರು. ಬದುಕಿದ್ದಾಗ ರಾಮು ನಿತ್ಯ ಗುಣಮುಖಿಯಾಗುತ್ತಿದ್ದರು. ಈಗ ಕವಿತೆಗಳು ಗುಣಮುಖಿಗಳಾಗಬಹುದು. ನಮ್ಮೆಲ್ಲರಿಗೂ ಇದು ಒಂದು ಮಾರ್ಗ ಎಂದು ಹೇಳಿದರು.
ರಾಮು ಅವರ ಹೆಸರಿಗೆ ಜಾತಿ ಅಂಟಿಸಿ ವಿಕೃತಿ ಮೆರೆದರು. ಆಗ ಅಕ್ಷರಶಃ ಕುಸಿತುಹೋಗಿದ್ದರು. ಕೊನೆಯವರೆಗೂ ಅವರ ಒಟ್ಟು ಹುಡುಕಾಟ ಸತ್ಯದ ಹುಡುಕಾಟವಾಗಿತ್ತು ಎಂದು ತಿಳಿಸಿದರು. ವನ್ಯಜೀವಿ ತಜ್ಞರಾದ ಕೃಪಾಕರ, ಸೇನಾನಿ, ಅಕ್ಷತಾ ಇದ್ದರು.