ಹುಬ್ಬಳ್ಳಿ: ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಜಾನಪದ ತಜ್ಞ ಡಾ. ರಾಮು ಮೂಲಗಿ ಅವರಿಗೆ ಮಾ. 15ರಂದು ಬೆಳಗ್ಗೆ 11.30ಕ್ಕೆ ಬೀದರ್ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಕಳೆದ ವರ್ಷ ನಡೆದ ಅಕಾಡೆಮಿಯ ಸಭೆಯಲ್ಲಿ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಡಾ. ರಾಮು ಮೂಲಗಿ ಅವರನ್ನು ಹಂತಿ ಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಆಯ್ಕೆ ಮಾಡಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾಗಿರುವ ಗೌರವ ಪ್ರಶಸ್ತಿ ಪುರಸ್ಕೃತರು, ತಜ್ಞರ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಿತರನ್ನು ಗೌರವಿಸುವ ಸಮಾರಂಭ ಬೀದರ್ ನಲ್ಲಿ ಆಯೋಜನೆಗೊಂಡಿದೆ. ಪ್ರಶಸ್ತಿಯು 25 ಸಾವಿರ ನಗದು, ಫಲಕ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾಗತೀಕರಣದ ಈ ದಿನಗಳಲ್ಲಿ ಜನಪದ ಸಾಹಿತ್ಯ ಮರೆಯಾಗುತ್ತಿದೆ. ಅದರ ಉಳಿವಿಗಾಗಿ, ಶಾಲಾ, ಕಾಲೇಜು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೂಲ ಜನಪದದ ಹಾಡುಗಳನ್ನು ಹಾಡುತ್ತಾ ಜನಸಾಮಾನ್ಯರಲ್ಲಿ ಸ್ಪೂರ್ತಿಯನ್ನು ತುಂಬುತ್ತಿರುವ ಉತ್ತರ ಕರ್ನಾಟಕದ ಪ್ರಮುಖರಲ್ಲಿ ನಿವೃತ್ತ ಶಿಕ ಡಾ. ರಾಮು ಮೂಲಗಿ ಒಬ್ಬರು.