ಜಿಲ್ಲೆ

ಇಂದು ರಾಂಪುರ ಮಠದ ವಟು, ಉತ್ತರಾಧಿಕಾರಿ ಆಯ್ಕೆ

ಸಾಸ್ವೆಹಳ್ಳಿ: ಹೊನ್ನಾಳಿ ತಾಲೂಕಿನ ರಾಂಪುರ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ನೂತನ ವಟು ಹಾಗೂ ಉತ್ತರಾಧಿಕಾರಿ ಆಯ್ಕೆ ಜು. 10 ರಂದು ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಕಾಶಿಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಹಾಗೂ ಮಠದ ಸರ್ವಭಕ್ತರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಕಾಶಿ ಶ್ರೀಗಳು ಮಂಗಳವಾರ ಸಂಜೆ ಮಠಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ.

ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ, ಮಠದ ಉಸ್ತುವಾರಿ ನಿರ್ವಹಿಸುತ್ತಿರುವ ಶಿವಕುಮಾರ ಹಾಲಸ್ವಾಮಿ ಸೇರಿದಂತೆ ಶ್ರೀ ಮಠಕ್ಕೆ ಹಲವಾರು ಶಾಖಾ ಮಠಗಳಿದ್ದು, ಈ ಮಠಗಳ ಶ್ರೀಗಳು ಭಾಗಿಯಾಗಲಿದ್ದಾರೆ.

ತಾತ್ಕಾಲಿಕವಾಗಿ ಮಠದ ನಿರ್ವಹಣೆ
ಕೋವಿಡ್‌ನಿಂದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಜು. 15, 2020ರಲ್ಲಿ ಲಿಂಗೈಕ್ಯರಾದ ನಂತರದಲ್ಲಿ ಮಠದ ಉತ್ತರಾಧಿಕಾರಿ ಆಯ್ಕೆ ನಡೆದಿಲ್ಲ. ತಾತ್ಕಾಲಿಕವಾಗಿ ಮಠದ ಆಡಳಿತವನ್ನು ಲಿಂಗೈಕ್ಯ ಶ್ರೀಗಳ ಸಹೋದರ ಶಿವಕುಮಾರ ಹಾಲಸ್ವಾಮಿಗಳು ನೋಡಿಕೊಂಡು ಹೋಗುತ್ತಿದ್ದರು.

ಒಂಬತ್ತು ಅಪೇಕ್ಷಿತರ ಪಟ್ಟಿಯಲ್ಲಿ ಒಬ್ಬರು ಅಂತಿಮ
ಮಠದ ಮೂಲಗಳು ತಿಳಿಸಿರುವಂತೆ ಈಗಾಗಲೇ 9 ಅವಿವಾಹಿತ ಅಪೇಕ್ಷಿತರ ಪಟ್ಟಿ ಕಾಶಿ ಶ್ರೀಗಳ ಕೈ ಸೇರಿದ್ದು, ಇದರಲ್ಲಿ ಒಬ್ಬರ ಆಯ್ಕೆ ಅಂತಿಮಗೊಳ್ಳಲಿದೆ.

ಜ್ಯೋತಿಷ್ಯ ಆಧಾರದ ಮೇಲೆ ಅಥವಾ ಮಠದ ಪಲ್ಲಕ್ಕಿ ಉತ್ಸವ ಮೂರ್ತಿಯ ಅಪ್ಪಣೆಯಂತೆ ನೂತನ ವಟುವಿನ ಆಯ್ಕೆ ನಡೆಸುವುದಾಗಿ ಕಾಶಿ ಶ್ರೀಗಳು ಈಗಾಗಲೇ ಭಕ್ತರಿಗೆ ತಿಳಿಸಿದ್ದಾರೆ. ನೆರೆದ ಭಕ್ತರ ಅಂತಿಮ ತೀರ್ಮಾನದಂತೆ ಒಂದು ವಿಧಾನದ ಮೂಲಕ ವಟುವಿನ ಆಯ್ಕೆ ನಡೆಯಲಿದೆ.