ಕೊಟ್ಟೂರು ತಾಲೂಕು ಚಿರಬಿ ಮತ್ತು ರಾಂಪುರ ಗ್ರಾಮಗಳ ನಡುವೆ ಇರುವ ಶ್ರೀ ಮೂಗಬಸವೇಶ್ವರ ಸ್ವಾಮಿ ದೇವಾಲಯ. 
ಜಿಲ್ಲೆ

ರಾಂಪುರ-ಚಿರಬಿ ಗ್ರಾಮಸ್ಥರ ನಡುವೆ ಮೂಡದ ಒಮ್ಮತ

ರುದ್ರಪ್ಪ ವಾಲಿ

ಕೊಟ್ಟೂರು: ಆ.18ರಂದು ಜರುಗಬೇಕಿದ್ದ ರಾಂಪುರ-ಚಿರಬಿ ನಡುವೆ ಇರುವ ಮೂಗಬಸವೇಶ್ವರ ಸ್ವಾಮಿ ರಥೋತ್ಸವ ರದ್ದುಮಾಡಿ ವಿಜಯನಗರ ಡಿಸಿ ಆದೇಶ ಹೊರಡಿಸಿದ್ದಾರೆ. 18 ವರ್ಷದ ನಂತರ ರಥೋತ್ಸವ ಜರುಗಲಿದೆ ಎಂಬ ಭಕ್ತರ ಭರವಸೆ ಹುಸಿಯಾಗಿದೆ.

ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಹೋಗಲು ಯಾವುದೇ ನಿರ್ಬಂಧ ಇಲ್ಲವೆಂದು ಆದೇಶದಲ್ಲಿ ತಿಳಿಸಿದ್ದಾರೆ. 2007ರಲ್ಲಿ ರಾಂಪುರ ಮತ್ತು ಚಿರಬಿ ಗ್ರಾಮಸ್ಥರ ನಡುವೆ ನಡೆದ ಜಗಳದಿಂದ ರಥೋತ್ಸವ ಈವರೆಗೂ ನಡೆದಿರಲಿಲ್ಲ. ಈ ವ್ಯಾಜ್ಯ ಕಳೆದ 18ವರ್ಷಗಳಿಂದ ಕೋರ್ಟ್‌ನಲ್ಲಿದ್ದು, ತೀರ್ಪು ಹೊರಬಿದ್ದಿಲ್ಲ. ಭಕ್ತರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿ ಅವರು 5ಸಾರಿ ಎರಡೂ ಗ್ರಾಮಸ್ಥರನ್ನು ಕರೆದು ವಾಸ್ತವ ಸ್ಥಿತಿ ತಿಳಿಸಿದ್ದರು.

ಹೆಚ್ಚುವರಿ ಎಸ್ಪಿ ಮಂಜುನಾಥ ಮತ್ತು ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಹಾಗೂ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಮತ್ತು ತಹಸೀಲ್ದಾರ್ ಜಿ.ಕೆ. ಅಮರೇಶ ಚಿರಬಿ ಅವರು ರಾಂಪುರ ಗ್ರಾಮದಲ್ಲಿ ಸಭೆ ನಡೆಸಿದರು.

ರಾಂಪುರ ಗ್ರಾಮಸ್ಥರು ನಮ್ಮದೇ ನೇತೃತ್ವದಲ್ಲಿ ರಥೋತ್ಸವ ಜರುಗಬೇಕು ಎಂದು ಹಠಮಾಡಿದ್ದರಲ್ಲದೆ, ನಮ್ಮನ್ನು ಹೊರತುಪಡಿಸಿ ರಥೋತ್ಸವವಾದರೆ ಗಲಾಟೆಯಾಗುತ್ತದೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ದೇವಾಲಯ ಸರ್ಕಾರಿ ಭೂಮಿಯಲ್ಲಿದ್ದು, ದೇವಾಲಯದ ಆಡಳಿತ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದೆ. ರಥೋತ್ಸವ ಮಾಡಲು ಕಳೆದ 5 ತಿಂಗಳಿಂದಲೂ ಜಿಲ್ಲಾಡಳಿತ ಮಾಡಿದ ಶ್ರಮ ವ್ಯರ್ಥವಾಗಿದ್ದು ಎರಡೂ ಗ್ರಾಮಸ್ಥರ ಹಠಮಾರಿತನದಿಂದ ಭಕ್ತರ ಮನಸಿಗೆ ನೋವುಂಟು ಮಾಡಿದೆ.