ಬಳ್ಳಾರಿ ನಗರದ ಜೈನ್‌ಮಾರುಕಟ್ಟೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರಾಮ ಮತ್ತು ಹನುಮನ ವೇಷಧರಿಸಿದ ಚಿಣ್ಣರು.  
ಜಿಲ್ಲೆ

ಗಣಿನಾಡಿನಲ್ಲಿ ಅದ್ದೂರಿ ರಾಮೋತ್ಸವ

Bellari - Heera Nayak

ಬಳ್ಳಾರಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ಅದ್ದೂರಿ ರಾಮೋತ್ಸವ ಆಚರಿಸಲಾಯಿತು. ಶಾಲೆ-ಕಾಲೇಜುಗಳಲ್ಲಿ, ವಿವಿಧ ಸಂಘ-ಸಂಸ್ಥೆಗಳಲ್ಲಿ ರಾಮನ ವೇಷಧರಿಸಿ ಮಕ್ಕಳು ಸಂಭ್ರಮಿಸಿದರು.

ಇನ್ನು ಐತಿಹಾಸಿಕ ರಾಮಮಂದಿರ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಯುವಕರು ಕೇಸರಿ ಧ್ವಜವನ್ನು ಹಿಡಿದು ಬಳ್ಳಾರಿ ನಗರದಾದ್ಯಂತ ಬೈಕ್ ರ‌್ಯಾಲಿ ಮಾಡುವ ಮೂಲಕ ಸಂಭ್ರಮಿಸಿದರು. ಮಹಿಳೆಯರು ವಿವಿಧ ದೇಗುಲಗಳಲ್ಲಿ ಭಜನೆ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಗಮನ ಸೆಳೆದರು.

ರಾಮಮಂದಿರದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ ಮಾಡಲಾಯಿತು. ನೈರ್ಮಲ್ಯ ವಿಸರ್ಜನೆ, ಸುಪ್ರಭಾತ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಕೃಷ್ಣಾರತಿ, ಮಹಾಭಿಷೇಕ ಮಾಡಿ ರಾಮ ನಾಮ ಜಪ ಮಾಡಲಾಯಿತು. ಅದರ ಜೊತೆಗೆ ಮಹಿಳೆಯರು ರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಭಜನೆ ಕೀರ್ತನೆ ಹಾಡುವ ಮೂಲಕ ಶ್ರೀರಾಮ ಜಯರಾಮ ಘೋಷಣೆ ಕೂಗುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ಬಳಿಕ ದೇವಸ್ಥಾನದಲ್ಲಿ ಊಟೋಪಚಾರ, ಪ್ರಸಾದ ವಿತರಣೆ ಮಾಡಲಾಯಿತು.

ದೇಗುಲಗಳಲ್ಲಿ ಪ್ರಸಾದ ವ್ಯವಸ್ಥೆ
ಬಳ್ಳಾರಿ ನಗರದ ಐತಿಹಾಸಿಕ ರಾಮಮಂದಿರದಲ್ಲಿ ಶಾಸಕ ನಾರಾ ಭರತ್‌ರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಾಮನ ದರ್ಶನ ಪಡೆಯಲು ನಗರ ಅಲ್ಲದೆ ಜಿಲ್ಲೆಯ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸಿದ್ದರು. ಇಲ್ಲಿನ ಮೋತಿ ವೃತ್ತದಲ್ಲಿರುವ ಶ್ರೀರಾಮ ಮಂದಿರ ಕಳೆದ 250 ವರ್ಷಗಳ ಹಿಂದಿನ ಇತಿಹಾಸ ಹೊಂದಿದ್ದು, ಭಕ್ತರ ಇಷ್ಟಾರ್ಥ ಸಿದ್ಧಿಯಾಗಿದೆ ಎಂದು ದೇಗುಲದ ಅರ್ಚಕರು ತಿಳಿಸುತ್ತಾರೆ. ಅಲ್ಲದೆ ಕನಕದುರ್ಗಮ್ಮ ದೇವಸ್ಥಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಭಕ್ತರ ದಂಡು ಇತ್ತು. ಭಕ್ತರಿಗಾಗಿ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರತಿ ಹಳ್ಳಿಗಳಲ್ಲೂ ರಾಮನಾಮ ಸ್ಮರಣೆ
ರಾಮಮಂದಿರ ನಿರ್ಮಾಣ ಅನೇಕ ವರ್ಷಗಳ ಕನಸು ಇದೀಗ ನನಸಾಗಿದ್ದು, ಗ್ರಾಮೀಣ ಭಾಗದಲ್ಲೂ ಭಕ್ತರು ರಾಮನಾಮ ಸ್ಮರಣೆ ಮಾಡುತ್ತಿದ್ದಾರೆ. ತಿರುಮಲ ಕ್ಯಾಂಪ್, ಕೃಷ್ಣನಗರ ಕ್ಯಾಂಪ್ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಿ ಹಳ್ಳಿಯ ಜನರು ಭಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನೆರೆವೇರಿಸಿದರು.

ಕೃಷ್ಣ ಮಂದಿರದಲ್ಲಿ ಸಂಭ್ರಮಾಚರಣೆ
ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆ ಬಳ್ಳಾರಿಯ ರಾಯಲ್ ಕಾಲನಿಯ ಕೃಷ್ಣ ಮಂದಿರದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಬೆಳಗ್ಗೆಯಿಂದಲೇ ಮಹಿಳೆಯರು ರಾಮಮಂದಿರದ ರಂಗೋಲಿ ಸೇರಿದಂತೆ ಹಲವು ಬಗೆ ಬಗೆಯ ರಂಗೋಲಿಗಳನ್ನು ಹಾಕುವ ಮೂಲಕ ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂಭ್ರಮಾಚರಣೆ ಇಮ್ಮಡಿಗೊಳಿಸಿದರು.

ಅತ್ತ ರಾಮನ ಪ್ರಾಣ ಪ್ರತಿಷ್ಠಾಪನೆ ಘಳಿಗೆ ವೇಳೆ ಕೃಷ್ಣನಿಗೆ ಮಹಾ ಮಂಗಳಾರತಿ ಮಾಡಿದ್ದಷ್ಟೇ ಅಲ್ಲದೆ ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು. ಇನ್ನು ದೇವಸ್ಥಾನದ ಮುಂದೆ ಬೃಹತ್ ಎಲ್ಇಡಿ ಪರದೆ ಹಾಕುವ ಮೂಲಕ ಪ್ರಾಣಪ್ರತಿಷ್ಠಾಪನೆ ಎಲ್ಲ ಕಾರ್ಯಕ್ರಮವನ್ನು ಭಕ್ತರು ಕಣ್ತುಂಬಿಕೊಳ್ಳುವಂತೆ ಮಾಡಿದರು. ಮಕ್ಕಳು ಮಹಿಳೆಯರು ರಾಮನ ಹಾಡಿನ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ಈ ವೇಳೆ ದೇವಸ್ಥಾನದ ಅಧ್ಯಕ್ಷ ಪ್ರಕಾಶ ರಾವ್, ರಘುರಾಮ, ಉದಯ, ಪ್ರಾಣೇಶ್, ರಾಘವೇಂದ್ರ, ವೆಂಕಟೇಶ, ಶೋಭಾರಾಣಿ, ಸುನಿತಾ, ಕವಿತಾ, ಮಮತಾ, ಹರಿಪ್ರಿಯಾ, ವೇದಾವತಿ, ವೀಣಾ, ಲಕ್ಷ್ಮೀ, ರಮ್ಯಾ, ವಿಜಯಲಕ್ಷ್ಮೀ, ಪೂರ್ಣಿಮಾ ಸೇರಿದಂತೆ ಇತರರು ಇದ್ದರು.