ಜಿಲ್ಲೆ

ಜಿಲ್ಲೆಯಲ್ಲಿ ರಾಮೋತ್ಸವ ಸಂಭ್ರಮ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಯೋಧ್ಯಾಪತಿ ಪ್ರಭು ಶ್ರೀರಾಮಚಂದ್ರ ಕೀ ಜೈ….ಜೈ ಶ್ರೀರಾಮ ಜೈ ಜೈ ಶ್ರೀರಾಮ.. ಹೀಗೆ ಜಿಲ್ಲೆಯಾದ್ಯಂತ ಶ್ರೀರಾಮನ ಜಯ ಘೋಷಗಳು ಮೊಳಗಿದವು.
ಶತಮಾನಗಳ ಕನಸು ರಾಮನೂರಿನಲ್ಲಿ ಸೋಮವಾರ ಮಧ್ಯಾಹ್ನ ಬರೋಬ್ಬರಿ 12.30ಕ್ಕೆ ನನಸಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. 2-3 ದಿನಗಳ ಹಿಂದೆಯೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಬಹುತೇಕ ದೇವಾಲಯಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಹೋಮ, ಹವನ, ವಿಶೇಷ ಪೂಜೆ, ರಾಮನಾಮ ಜಪ, ಧಾರ್ಮಿಕ ಕಾರ್ಯ ನಡೆದವು. 12.30ಕ್ಕೆ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಆಗುತ್ತಿದ್ದಂತೆ ಘೋಷಣೆ ಮೊಳಗಿಸಿ ಸಂಭ್ರಮಿಸಿದರು.
ಗಾಂಧಿಚೌಕ್ ದತ್ತಾತ್ರೇಯ ದೇವಸ್ಥಾನದಲ್ಲಿ ಅನಂತ ಗೋಡಖಿಂಡಿ ನೇತೃತ್ವದಲ್ಲಿ ರಾಮತಾರಕ ಹೋಮ, ಲೈನ್ ಬಜಾರ್ ಹನುಮಾನ ದೇವಸ್ಥಾನ, ಟಿಕಾರೆ ರಸ್ತೆ ಶ್ರೀರಾಮ ದೇವಸ್ಥಾನದಲ್ಲಿ ಸಾಮೂಹಿಕ ಪವಮಾನ ಹೋಮ, ರಾಮತಾರಕ ಹೋಮಗಳು, ಆರ್‌ಟಿಒ ಕಚೇರಿ ಬಳಿಯ ಪವಾಡ ಹನುಮಂತ ದೇವಸ್ಥಾನ ಸೇರಿ ಇನ್ನೂ ಕೆಲ ದೇವಸ್ಥಾನಗಳಲ್ಲೂ ಹೋಮ, ಅನ್ನಸಂತರ್ಪಣೆ ನೆರವೇರಿಸಲಾಯಿತು.
ಶಾಂತಿನಿಕೇತನ ನಗರದ ಶ್ರೀ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಬಡಾವಣೆ ನಿವಾಸಿಗಳು ಬೃಹತ್ ಪ್ರಮಾಣದಲ್ಲಿ ಮಂದಿರ ಹಾಗೂ ಶ್ರೀರಾಮನ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದಲ್ಲದೆ, ಕುಂಭ ಮೆರವಣಿಗೆ ನಡೆಸಿ ಸಂಭ್ರಮದಿಂದ ರಾಮೋತ್ಸವ ಆಚರಿಸಿದರು.
ಇನ್ನು ಮಾರುಕಟ್ಟೆ, ಪ್ರಮುಖ ವೃತ್ತಗಳು ಹಾಗೂ ಬಡಾವಣೆಗಳಲ್ಲಿ ವ್ಯಾಪಾರಸ್ಥರು, ಸಾರ್ವಜನಿಕರು ಅಲ್ಲಲ್ಲಿ ರಾಮನ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಪಾನಕ, ಹಾಲು, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ರಾಮ ಪ್ರತಿಷ್ಠಾಪನೆ ಬಳಿಕ ಯುವಕರು ಕೇಸರಿ ಶಾಲುಗಳನ್ನು ಧರಿಸಿ, ಕೇಸರು ಧ್ವಜಗಳೊಂದಿಗೆ ದ್ವಿ ಚಕ್ರ ವಾಹನ ಹಾಗೂ ಕಾರುಗಳಲ್ಲಿ ಇಡೀ ನಗರದಲ್ಲಿ ರಾಮ ಘೋಷಣೆ ಕೂಗುತ್ತ ಸಂಚರಿಸಿದರು.

ಮನೆಗಳಲ್ಲಿ ಬೆಳಗಿದ ದೀಪಬೆಳಗ್ಗೆ ಮನೆಯಲ್ಲಿ ಶ್ರೀರಾಮ ಚಂದ್ರನ ಪೂಜೆ ನೆರವೇರಿಸಿ ಸಂಭ್ರಮಿಸಿದ್ದ ಸಾರ್ವಜನಿಕರು ಸಂಜೆ ಹೊತ್ತಿನಲ್ಲಿ ದೀಪ ಬೆಳಗಿಸಿ ರಾಮೋತ್ಸವ ಪೂರ್ಣಗೊಳಿಸಿದರು. ಪ್ರತಿ ಮನೆಗಳಲ್ಲೂ ದೀಪ ಬೆಳೆಗಿದ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ದೀಪಾವಳಿಯ ಸಂಭ್ರಮ ಮತ್ತೊಮ್ಮೆ ಮರುಕಳಿಸಿದಂತಾಗಿತ್ತು. ಮನೆಗಳು ಮಾತ್ರವಲ್ಲದೆ ದೇವಸ್ಥಾನಗಳಲ್ಲಿ ಸಹ ದೀಪಗಳನ್ನು ಹಚ್ಚಿ ಪ್ರಭು ಶ್ರೀರಾಮಚಂದ್ರನಿಗೆ ನಮನ ಸಲ್ಲಿಸಲಾಯಿತು.