ಮೈಸೂರು: ನಾಡಹಬ್ಬ ದಸರಾ ಉತ್ಸವವನ್ನು ಅದರ ಮೂಲ ಆಶಯಗಳಿಗೆ ಪೂರಕವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಗರದ ಸಂಘ ಸಂಸ್ಥೆಗಳು ಹಾಗೂ ಅನುಭವಿಗಳ ಅಭಿಪ್ರಾಯವನ್ನು ಸರ್ಕಾರ ಪಡೆಯಬೇಕು ಎಂದು ಇನಿದನಿ ಸಂಸ್ಥೆಯ ಗೌರವಾಧ್ಯಕ್ಷ ಡಾ.ಕಾ. ರಾಮೇಶ್ವರಪ್ಪ ಆಗ್ರಹಿಸಿದರು.
ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆ ನಡೆಸಿ ದಸರಾ ನಡೆಸಿದರೆ ಸಾಲದು, ದಸರಾ ನಾಡಹಬ್ಬವಾಗಬೇಕಾದರೆ ನಗರದ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು, ಗಣ್ಯರು, ಕಲಾವಿದರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರ ಅಭಿಪ್ರಾಯವನ್ನು ಆಲಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದು ಗಮನ ಸೆಳೆಯಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ಜನರು ಅಂದುಕೊಂಡ ರೀತಿಯಲ್ಲಿ ದಸರಾ ನಡೆಯುತ್ತಿಲ್ಲ, ದಸರಾ ತನ್ನ ಅರ್ಥವನ್ನು ಕಳೆದುಕೊಂಡಿದೆ. ಬಹಳಷ್ಟು ಸಮಯ ಮೊದಲೇ ಉಪ ಸಮಿತಿಗಳ ರಚನೆ ಆಗಬೇಕು, ಪ್ರೇಕ್ಷಕರ ಕೊರತೆ ಎದುರಾಗುವುದನ್ನು ತಪ್ಪಿಸಲು ಏಕಕಾಲಕ್ಕೆ ಹಲವು ಕಾರ್ಯಕ್ರಮಗಳನ್ನು ನಡೆಸಬಾರದು, ಮೈಸೂರು ಅರಸರು ಮತ್ತು ದಸರಾ ಪರಂಪರೆಗಳ ಬಗ್ಗೆ ವಿಚಾರಗೋಷ್ಠಿ ಮತ್ತು ಚರ್ಚೆ ನಡೆಯಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಪ್ರಸ್ತುತಗೊಳ್ಳಬೇಕು ಎಂದು ಒತ್ತಾಯಿಸಿದರು.
ಯುವ ದಸರಾ ಉದ್ದೇಶವೇ ನಾಶವಾಗಿದೆ. ಅದು ಕೇವಲ ಬಾಂಬೆ ಆರ್ಕೇಸ್ಟ್ರಾಕ್ಕೆ ಸೀಮಿತವಾಗಿದ್ದು, ಯುವಜನರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು. ಆಹಾರ ಮೇಳಗಳಲ್ಲಿ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಬೇಕು. ಕವಿಗೋಷ್ಠಿ ಜವಾಬ್ದಾರಿಯನ್ನು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ವಹಿಸಬೇಕು. ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ದಸರಾ ಆಚರಣೆಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಈ ಬಾರಿಯ ದಸರಾಕ್ಕೆ ಹೆಚಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಚೌಲ್ಟ್ರಿ ಹಾಗೂ ಶಾಲಾ ಕಾಲೇಜುಗಳಲ್ಲಿ ವಸತಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನರಸಿಂಹಮೂರ್ತಿ, ಶ್ರೀನಿವಾಸ್, ರಘುನಾಥ್, ಪಂಡಿತ್ ಗಣೇಶ್ ಭಟ್ ಹಾಗೂ ಇತರರು ಇದ್ದರು.