ಕೂಡಿಗೆ: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನಲ್ಲಿ ೮೧ ಲಕ್ಷದ ೧೫ ಸಾವಿರದ ೫೪೧ ರೂಗಳಷ್ಟು ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ್ಯತೆ ವಹಿಸಿ ಮಾತನಾಡಿದ ಅವರು, ಸದಸ್ಯರ ಸಹಕಾರದೊಂದಿಗೆ ಲಾಭಗಳಿಸಿದೆ. ಸದಸ್ಯರ, ಆಡಳಿತ ಮಂಡಳಿ, ಸಿಬ್ಬಂದಿಗಳ ಪ್ರಯತ್ನದಿಂದಾಗಿ ಸಂಘವು ಸತತವಾಗಿ ಜಿಲ್ಲಾ ಕೇಂದ್ರ ಬ್ಯಾಂಕ್, ಮತ್ತು ಆಫೇಕ್ಸ್ ಬ್ಯಾಂಕ್‌ನಿಂದ ಪ್ರಶಸ್ತಿ ಮತ್ತು ಬಹುಮಾನವನ್ನು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಪ್ರಗತಿಪರ ಯೋಜನೆಗೆ ಸಹಕಾರ ನೀಡುವುದರ ಜೊತೆಗೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ಸಂಘದ ಅಭಿವೃದ್ಧಿ ದೃಷ್ಠಿಯಿಂದ ಸ್ತಿರಾಸ್ತಿಗಳ ಖರೀದಿ, ಕಟ್ಟಡ ನಿರ್ಮಾಣದ ಮೂಲಕ ಸಂಘದ ಏಳಿಗೆಗೆ ಆಡಳಿತ ಮಂಡಳಿ ಕೆಲಸ ನಿರ್ವಹಿಸಿದೆ ಎಂದರು.
ಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ವಿತರಣೆ ಮಾಡಲಾಯಿತು. ಸಭೆಯಲ್ಲಿ ಸಂಘದ ಪ್ರಗತಿಗೆ ಪೂರಕವಾದ ವಿವಿಧ ಬಗೆಯ ಅಂಶಗಳನ್ನು ಒಳಗೊಂಡ ಸಮಗ್ರ ಚರ್ಚೆ ನಡೆಯಿತು. ಸದಸ್ಯರು ಸಲಹೆ ಸೂಚನೆಗಳನ್ನು ಆಡಳಿತ ಮಂಡಳಿಗೆ ನೀಡಿದರು. ೨೦೨೫-೨೬ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ, ನಿವ್ವಳ ಲಾಭಗಳ ವಿಲೇವಾರಿಗಳ ಬಗ್ಗೆ ಅನುಮೋದನೆ ಸೇರಿದಂತೆ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಂಘದ ಬೆಳವಣಿಗೆಗೆ ಪೂರಕವಾದ ವಿಷಯಗಳ ಪ್ರಸ್ತಾವನೆಗಳು ನಡೆದವು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಿ.ಬಸಪ್ಪ, ನಿರ್ದೇಶಕರಾದ ಕೆ.ಟಿ.ಅರುಣ್ ಕುಮಾರ್, ಕೃಷ್ಣೇಗೌಡ, ಕೆ.ಕೆ.ಪವಿತ್ರ, ರಮೇಶ್, ಕೆ.ಜೆ.ಕುಮಾರ್, ನಾಗರಾಜ್, ಎಸ್.ಆರ್.ಅರುಣ್ ರಾವ್, ಕೆ.ಬಿ.ರಾಮಚಂದ್ರ, ಕೆ.ಪಿ.ರಾಜು, ಎಸ್.ಎಸ್.ಕೃಷ್ಣ, ಜಯಶ್ರೀ, ವೃತ್ತಿ ಪರ ನಿರ್ದೇಶಕ ನಾಗೇಂದ್ರ, ಡಿ.ಎನ್.ಚಂದ್ರಶೇಖರ್, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಅಬ್ದುಲ್ ರಶೀದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಹರ್ಷ ಹಾಜರಿದ್ದರು.
ಸಭೆಯಲ್ಲಿ ಸಂಘದ ವ್ಯಾಪ್ತಿಯ ೧೪ ಗ್ರಾಮಗಳ ಸಾವಿರಾರು ಸದಸ್ಯರು ಭಾಗವಹಿಸಿ, ಸಂಘದ ಅಭಿವೃದ್ಧಿ ಪೂರಕವಾದ ಅಂಶಗಳ ಬಗ್ಗೆ ಚರ್ಚೆಗಳನ್ನು ನಡೆಸಿದರು. ಎಂ.ಪಿ.ಮೀನಾ ಕಾರ್ಯಕ್ರಮ ನಿರೂಪಿಸಿ, ನಾಗೇಂದ್ರ ಅವರು ಸ್ವಾಗತಿಸಿ, ಎಸ್.ಆರ್.ಅರುಣ್ ರಾವ್ ವಂದಿಸಿದರು.