ಅರಕಲಗೂಡು : ತಾಲೂಕಿನ ರಾಮನಾಥಪುರದ ಪುರಾಣ ಪ್ರಸಿದ್ಧ ಚತುರ್ಯುಗಮೂರ್ತಿ ಶ್ರೀ ರಾಮೇಶ್ವರ ದೇವಾಲಯದಲ್ಲಿ ಮಳೆಗೆ ಗೋಪುರ ವಿಗ್ರಹ ಕಳಚಿ ಬಿದ್ದು ಹಾನಿಯಾಗಿದೆ.
ಎರಡು ವರ್ಷಗಳ ಹಿಂದೆಯಷ್ಟೆ ದೇವಾಲಯ ಗೋಪುರದ ನವೀಕರಣ ಕಾರ್ಯ ನಡೆಸಲಾಗಿತ್ತು. ಇದೀಗ ಸತತವಾಗಿ ಸುರಿಯುತ್ತಿರುವ ಮಳೆಗೆ ಐತಿಹಾಸಿಕ ಶ್ರೀ ರಾಮೇಶ್ವರ ದೇವಾಲಯ ಮುಂಭಾಗದ ಗೋಪುರದ ಕಲಾಕೃತಿ ವಿಗ್ರಹ ಕಳಚಿ ನೆಲಕ್ಕೆ ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.
ಪುರಾಣದಲ್ಲಿ ವಾಸವಾಪುರಿ ಎಂದು ಕರೆಸಿಕೊಂಡಿದ್ದ ರಾಮನಾಥಪುರದ ಪ್ರಸಿದ್ಧಿಗೆ ಈ ದೇವಾಲಯ ಮುಕುಟ ಮಣಿಯಂತಿದೆ. ನಿರ್ವಹಣೆ ಇಲ್ಲದೆ ದೇವಸ್ಥಾನ ಶಿಥಿಲಾವಸ್ಥೆಗೆ ತಲುಪಿತ್ತು. ಪರಿಣಾಮವಾಗಿ ನಾಲ್ಕು ವರ್ಷಗಳ ಹಿಂದೆ ನಿರಂತರವಾಗಿ ಸುರಿದ ಮಳೆ ಹೊಡೆತಕ್ಕೆ ಸಿಲುಕಿ ಐತಿಹಾಸಿಕ ಶ್ರೀರಾಮೇಶ್ವರ ದೇವಾಲಯ ಗೋಪುರ ಮೇಲ್ಭಾಗದ ವಿಗ್ರಹ ಕಳಚಿ ಬಿದ್ದಿತ್ತು. ದೇವಸ್ಥಾನ ಗೋಪುರ ಕುಸಿದು ಬೀಳುವ ಆತಂಕದಿಂದಾಗಿ ಬರುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಯಾವುದೇ ಅನಾಹುತ ಆಗದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅಂದಿನ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮುಜರಾಯಿ ಇಲಾಖೆ ದೇವಸ್ಥಾನಕ್ಕೆ ಬೀಗ ಜಡಿದಿತ್ತು.
ಅಳಿವಿನ ಅಂಚಿನಲ್ಲಿದ್ದ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಅಂದಿನ ಶಾಸಕ ಎ.ಟಿ. ರಾಮಸ್ವಾಮಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದೇವಾಲಯದ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದ್ದರು. ಅದರಂತೆ ಧಾರ್ಮಿಕ ದತ್ತಿ ಇಲಾಖೆ ಜಿಲ್ಲಾಧಿಕಾರಿ ನಿಧಿಯಿಂದ 2021- 22ನೇ ಸಾಲಿನಲ್ಲಿ 70 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ದೇವಸ್ಥಾನ ಜೀಣೋದ್ಧಾರದ ಜವಾಬ್ದಾರಿ ಹೊತ್ತಿದ್ದ ಮೈಸೂರು ಪ್ರಾಚ್ಯವಸ್ತು ಇಲಾಖೆ ಸದ್ಯದ ಮಟ್ಟಿಗೆ 70 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ಅಭಿವೃದ್ಧಿ ಕಾರ್ಯ ಕೈಗೊಂಡಿತ್ತು. ಹೀಗಾಗಿ ಎರಡು ವರ್ಷಗಳ ಕಾಲ ಬಾಗಿಲು ಮುಚ್ಚಿದ್ದ ದೇವಾಲಯ ತಾತ್ಕಾಲಿಕವಾಗಿ ಕಾಯಕಲ್ಪ ಭಾಗ್ಯ ಕಂಡು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಗಿತ್ತು.
ಇದೀಗ ನವೀಕರಣಗೊಂಡಿದ್ದ ದೇವಾಲಯ ಮುಂಭಾಗದ ಗೋಪುರದ ಒಂದು ಭಾಗದ ವಿಗ್ರಹ ಕುಸಿದಿದೆ. ಐತಿಹಾಸಿಕ ಸ್ಮಾರಕ ಅವಸಾನದತ್ತ ಸಾಗಿದ್ದು ಸಂಬಂಧಪಟ್ಟವರು ಇತ್ತ ಗಮನ ಹರಿಸಿ ದೇವಾಲಯ ಅಭಿವೃದ್ಧಿಪಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.