ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂರಾರು ಅತಿಥಿ ಉಪನ್ಯಾಸಕರಿಗೆ ಕಳೆದ 3 ತಿಂಗಳಿನಿಂದ ವೇತನ ನೀಡದಿರುವುದು ಖಂಡನೀಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತಿಥಿ ಉಪನ್ಯಾಸಕರು
ಪ್ರತಿಭಟನೆ ನಡೆಸದೆ ವಿವಿಯ ಪ್ರಭಾರ ಕುಲಪತಿಗಳಿಗೆ ಸಂಬಳ ಬಿಡುಗಡೆ ಮಾಡುವಂತೆ ವಿನಂತಿ ಮಾಡಿದರು. ಆದರೆ ಹಣವಿಲ್ಲ ಎಂಬ ಕಾರಣ ನೀಡಿ ವೇತನ ನೀಡದೆ ಅನ್ಯಾಯ ಎಸಗಿದೆ ಎಂದು ಮಂಗಳೂರು ವಿ.ವಿ.ಮಾಜಿ ಸಿಂಡಿಕೇಟ್ ಸದಸ್ಯ ರಮೇಶ್ .ಕೆ. ಆರೋಪಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಅನೇಕ ವಿಭಾಗಗಳಲ್ಲಿ ಹೆಚ್ಚುವರಿ ಪಠ್ಯದ ಕಾರ್ಯಭಾರವಿದ್ದರೂ ಅನೇಕ ಅರ್ಹ ಅತಿಥಿ ಉಪನ್ಯಾಸಕರನ್ನು ಕೈ ಬಿಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಂಗಳೂರು ವಿವಿಯಲ್ಲಿ ಕುಲಪತಿ ಹುದ್ದೆಯು ಪ್ರಭಾರ ಸ್ಥಾನದಲ್ಲಿರುವುದರಿಂದ ಅನೇಕ ನಿರ್ಣಯವನ್ನು ಕ್ಲಪ್ತ ಸಮಯದಲ್ಲಿ ತೆಗೆದುಕೊಳ್ಳುವಲ್ಲಿ ಅವರು ಎಡವುತ್ತಿದ್ದಾರೆ. ಅತಿಥಿ ಉಪನ್ಯಾಸಕರಿಗೆ ವೇತನ ನೀಡದಿರುವ ಬಗ್ಗೆ ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯ ಗಮನಕ್ಕೆ ತರದೆ ವಿಷಯವನ್ನು ಮುಚ್ಚಿಟ್ಟಿರುವ ವಿವಿಯ ಪ್ರಭಾರ ಕುಲಪತಿಗಳ ಕ್ರಮ ಖಂಡನೀಯ.ಅತಿಥಿ ಉಪನ್ಯಾಸಕರ ಅಯ್ಕೆಯಲ್ಲಿಯೂ ತಾರತಮ್ಯ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಅತಿಥಿ ಉಪನ್ಯಾಸಕರ ವೇತನ ತಕ್ಷಣ ಬಿಡುಗಡೆ ಮಾಡಬೇಕು. ವಿಳಂಬ ನೀತಿ ಅನುಸರಿಸಿದರೆ ಹೋರಾಟ ನಡೆಸಲಾಗುವುದೆಂದು ರಮೇಶ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.