ಬೆಳಗಾವಿ: ಮಹದಾಯಿ ಯೋಜನೆಯ ನದಿ ನೀರು ಹಂಚಿಕೆ ವಿಚಾರದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಫೆ.26ರಂದು ಕೇಂದ್ರ ನೀರಾವರಿ ಸಚಿವರನ್ನು ಭೇಟಿಯಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯತ್ನಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಮಹದಾಯಿ ಯೋಜನೆ ನದಿ ನೀರು ಹಂಚಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಅವಶ್ಯವಿದ್ದಲ್ಲಿ ಮಹಾರಾಷ್ಟ್ರ, ಗೋವಾ ರಾಜ್ಯದ ನೀರಾವರಿ ಸಚಿವರನ್ನು ಭೇಟಿಯಾಗಿ ರ್ಚಚಿಸಿ ಬಗೆಹರಿಸಲಾಗುವುದು. ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ಕ್ಯಾತೆ ತೆಗೆದೆರೆ ಕಾನೂನು ಹೋರಾಟ ಮಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉತ್ತರ ಕರ್ನಾಟಕ ಭಾಗದ ನೀರಾವರಿಯ ಕೆಲ ಕಾಮಗಾರಿಗಳನ್ನು ತರಾತುರಿಯಲ್ಲಿ ಟೆಂಡರ್ ಮಾಡಿದ್ದಾರೆ. ಇವುಗಳನ್ನು ಮರು ಪರಿಶೀನೆ ನಡೆಸಲಾಗುವುದು. ಅಪ್ರಯೋಜಕ ಟೆಂಡರ್ ಕಾಮಗಾರಿಗಳನ್ನು ರದ್ದು ಪಡಿಸಲಾಗುವುದು ಎಂದು ಹೇಳಿದರು.
ಸರ್ಕಾರಕ್ಕೆ ಬೆದರಿಕೆ ಒಡ್ಡಿಲ್ಲ
ಸಚಿವ ಸ್ಥಾನದಿಂದ ವಂಚಿತರಾಗಿರುವ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ನನ್ನಿಂದ ಏನಾದರೂ ಅನ್ಯಾಯವಾದಲ್ಲಿ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದೇನೆಯೇ ಹೊರತು ಸರ್ಕಾರಕ್ಕೆ ಬೆದರಿಕೆ ಯೊಡ್ಡಿಲ್ಲವೆಂದು ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ರಾಜೀನಾಮೆ ನೀಡುವುದಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಆದರೆ ಅವರಿಗೆ ನನ್ನಿಂದ ಅನ್ಯಾಯವಾದಲ್ಲಿ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದೇನೆ. ಇದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.