ಬೆಳಗಾವಿ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಹುಕರ್ನ ಸ್ವಕ್ಷೇತ್ರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಯ್ಯೋಯ್ಯೋ ಅನ್ಯಾಯ... ಎಂದು ಕೂಗಾಡುತ್ತ ಬಸವೇಶ್ವರ ವೃತ್ತದಲ್ಲಿ ಹೈಡ್ರಾಮ ಮಾಡಿದ ರಮೇಶ್ ಜಾರಕಿಹೊಳಿ ಬೆಂಬಲಿಗರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಅಲ್ಲದೆ ರಾಜ್ಯ ಸರ್ಕಾರಕ್ಕೂ ಮುಜುಗರ ಉಂಟಾಗಿದ್ದು, ವಿಪಕ್ಷಗಳಿಂದಲೂ ರಾಜೀನಾಮೆ ಪಡೆಯುವಂತೆ ಆಗ್ರಹ ಕೇಳಿಬಂದಿತ್ತು. ಹಲವೆಡೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಬೀದಿಗಿಳಿದು ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಚಿವ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇತ್ತ ನಾನು ಯಾವ ತಪ್ಪನ್ನೂ ಮಾಡಿಲ್ಲ, ನಾನೇಕೆ ರಾಜೀನಾಮೆ ಕೊಡಲಿ ಎಂದು ಜಾರಕಿಹೊಳಿ ಹೇಳಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ರಾಜೀನಾಮೆ ಪಡೆಯಬೇಕೆಂದು ಸಿಎಂ ಯಡಿಯೂರಪ್ಪಗೆ ಪಕ್ಷದ ಹೈಕಮಾಂಡ್ ಸೂಚಿಸಿತ್ತು. ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿರಿ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಬಂಡಾಯ ಕೈವಾಡ? ಶಿವರಾಮ್ ಹೆಬ್ಬಾರ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಮೇಶ್ ರಾಜೀನಾಮೆ ಬೆನ್ನಲ್ಲೇ ಗೋಕಾಕ್ ಪಟ್ಟಣ ಬಂದ್ ಮಾಡಲು ಜಾರಕಿಹೊಳಿ ಬೆಂಬಲಿಗರು ಮುಂದಾಗಿದ್ದು, ಗೋಕಾಕ್ನ ಬೀದಿ ಬೀದಿಗಳಲ್ಲಿ ತಿರುಗಾಡಿ ಅಂಗಡಿ ಬಂದ್ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.